ನಲ್ ಜಲ್ ಮಿತ್ರ ತರಬೇತಿ ವೆಚ್ಚ ಭರಿಸಲು ವಿರೋಧ

Vidhanasoudha
Published on

ಬೆಂಗಳೂರು: ನಲ್ ಜಲ್ ಮಿತ್ರ ಯೋಜನೆಯಡಿ ಕೌಶಲ ತರಬೇತಿ ವೆಚ್ಚ ಭರಿಸಲು ಗ್ರಾಮ ಪಂಚಾಯಿತಿಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಗ್ರಾಮ ಪಂಚಾಯಿತಿ ಹಂತದಲ್ಲಿ ನಲ್ ಜಲ್ ಕಾರ್ಯಕ್ರಮ ನಿರ್ವಹಣೆ ಮಾಡಲು ನಲ್ ಜಲ್ ಮಿತ್ರ ಹೆಸರಿನಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸಲು ತರಬೇತಿ ನೀಡಲಾಗುತ್ತದೆ. ಒಂದು ಗ್ರಾಮ ಪಂಚಾಯಿತಿಯಲ್ಲಿ ಇಬ್ಬರಿಗೆ ತರಬೇತಿ ನೀಡಲು ಯೋಜಿಸಲಾಗಿದೆ. ಈ ತರಬೇತಿಗೆ ತಲಾ ಒಬ್ಬರಿಗೆ 29,790 ರೂ. ನಂತೆ ಇಬ್ಬರಿಗೆ ತಗಲುವ ವೆಚ್ಚವನ್ನು 15ನೇ ಹಣಕಾಸು ಯೋಜನೆಯಡಿ ತುರ್ತಾಗಿ ಭರಿಸುವಂತೆ ಪಂಚಾಯತ್ ರಾಜ್ ಆಯುಕ್ತಾಲಯ ನಿರ್ದೇಶನ ನೀಡಿದೆ.

ಆದರೆ, ಇದಕ್ಕೆ ಅನೇಕ ಗ್ರಾಮ ಪಂಚಾಯಿತಿಗಳು ವಿರೋಧ ವ್ಯಕ್ತಪಡಿಸಿವೆ. 10 ತಿಂಗಳ ಹಿಂದೆ ಕೂಡ ಈ ಹಣಕ್ಕಾಗಿ ಆದೇಶ ಹೊರಡಿಸಲಾಗಿತ್ತು. ಆಗಲೂ ಅನೇಕ ಗ್ರಾಪಂಗಳು ವಿರೋಧ ವ್ಯಕ್ತಪಡಿಸಿ ಹಣ ಪಾವತಿಸಿರಲಿಲ್ಲ. ಈಗ ಮತ್ತೊಮ್ಮೆ ಆದೇಶ ಹೊರಡಿಸಿ ತುರ್ತು ಹಣ ಪಾವತಿಸಲು ಸೂಚಿಸಲಾಗಿದೆ.

ಈಗಾಗಲೇ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಪ್ರತಿನಿಧಿಗಳು ಜಿಲ್ಲಾ ಮಟ್ಟದಲ್ಲಿ ಸಿಇಒ ಹಾಗೂ ಇಒಗಳನ್ನು ಭೇಟಿ ಮಾಡಿ ಹಣ ನೀಡುವುದಿಲ್ಲ ಎಂದು ಗಮನಕ್ಕೆ ತಂದಿದ್ದಾರೆ. ಜತೆಗೆ ಹಣ ಪಾವತಿಸದಿರುವ ಕುರಿತು ಅನೇಕ ಪಂಚಾಯಿತಿಗಳಲ್ಲೂ ನಡಾವಳಿ ಮಾಡಲಾಗಿದೆ.

ಅಧಿಕಾರಿಗಳು ನಿರಂತರವಾಗಿ 15ನೇ ಹಣಕಾಸಿನಲ್ಲಿ ಹಣಕ್ಕಾಗಿ ಕೈ ಹಾಕುವುದನ್ನು ಮುಂದುವರೆಸಿದ್ದಾರೆ. ಈ ಹಿಂದೆ ಅವರು ಮಹಿಳೆಯರಿಗೆ ಕಸವಿಲೇವಾರಿ ವಾಹನಕ್ಕೆ ಚಾಲನಾ ತರಬೇತಿ ನೀಡಲು ಹಣ ಪಾವತಿಸಲಾಗಿದೆ. ಕೂಸಿನ ಮನೆಗೆ ಬಣ್ಣ, ಚಿತ್ರಗಳು ಹಾಗೂ ಪರಿಕರಗಳ ಖರೀದಿ ಸೇರಿದಂತೆ ಅನೇಕ ಕಾರ್ಯಕ್ರಮಗಳಿಗೆ ಈ ಯೋಜನೆಯಡಿ ಹಣ ಬಿಡುಗಡೆ ಮಾಡಲಾಗಿದೆ. ರಾಜ್ಯ ಮಟ್ಟದಲ್ಲೇ ಒಂದೊಂದು ಕಾರ್ಯಕ್ರಮ ರೂಪಿಸಿ ಹಣ ಬಿಡುಗಡೆಗೆ ಒತ್ತಡ ಹೇರುತ್ತಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಆರ್ಥಿಕ ಮುಗ್ಗಟ್ಟು ಎದುರಾಗುತ್ತದೆ ಎಂದು ಗ್ರಾಪಂ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.

ನಮ್ಮ ಹಲವು ಹೋರಾಟಗಳ ನಂತರವೂ ಮೇಲ್ಮಟ್ಟದ ಅಧಿಕಾರಿಗಳಿಂದ ನಲ್ ಜಲ್ ಮಿತ್ರ ಕೌಶಲ ತರಬೇತಿಗೆ ಹಣ ಪಾವತಿಸುವಂತೆ ಸೂಚಿಸುತ್ತಿರುವುದು ಸರಿಯಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಭೇಟಿ ಮಾಡಿದರೂ ಪ್ರಯೋಜನವಾಗಿಲ್ಲ. ನಾವು ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ಗ್ರಾಮೀಣಾಭಿವೃದ್ಧಿ ಸಚಿವರನ್ನು ಒತ್ತಾಯಿಸುತ್ತೇವೆ.

-ನಾಗೇಶ್ ಉಪ್ಪರಕನಹಳ್ಳಿ, ರಾಜ್ಯ ಸಂಚಾಲಕ, ಗ್ರಾಪಂ ಸದಸ್ಯರ ಮಹಾ ಒಕ್ಕೂಟ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net