ಗ್ರಾಪಂ ಜಲಮೂಲಗಳ ಅತಿಕ್ರಮಣಗಳನ್ನು ತೆರವುಗೊಳಿಸಲು: ಪ್ರಿಯಾಂಕ್ ಖರ್ಗೆ ಸೂಚನೆ

Published on

ಬೆಂಗಳೂರು:

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಜಲಮೂಲಗಳ ಅತಿಕ್ರಮಣವನ್ನು ತೆರವುಗೊಳಿಸಲು ತ್ವರಿತವಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದ್ದಾರೆ.

ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ನಮ್ಮ ಜಲಾಶಯಗಳ ಸಂರಕ್ಷಣೆಯಿಂದ ಪರಿಸರ ಸಮತೋಲನವನ್ನು ಕಾಪಾಡಬಹುದು ಎಂದು ಸಚಿವರು ಹೇಳಿರುವರಲ್ಲದೆ, ಕೃಷಿ ಚಟುವಟಿಕೆಗಳನ್ನು ಬೆಂಬಲಿಸುವುದು ಹಾಗೂ ನಮ್ಮ ಸಮುದಾಯಗಳಿಗೆ ಜಲ ಭದ್ರತೆಯನ್ನು ಖಚಿತಪಡಿಸುವುದು ಆದ್ಯತೆಯ ಕ್ರಮವಾಗಬೇಕು ಎಂದು ತಿಳಿಸಿದ್ದಾರೆ.

ಗ್ರಾಮ ಪಂಚಾಯತಿ ವ್ಯಾಪ್ತಿಯ ಅನೇಕ ಜಲಾಶಯಗಳಲ್ಲಿ ಅತಿಕ್ರಮಣಗಳಾಗಿರುವ ಬಗ್ಗೆ ತಮಗೆ ಮಾಹಿತಿ ಬಂದಿದ್ದು ಈ ಗಂಭೀರ ವಿಷಯವನ್ನು ಗಮನದಲ್ಲಿಟ್ಟುಕೊಂಡು, ತಕ್ಷಣವೇ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಎಲ್ಲಾ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲು ಅಪರ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದ್ದಾರೆ.

ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಜಲಮೂಲಗಳ ಸಮೀಕ್ಷೆಯನ್ನು ನಡೆಸಿ ಅತಿಕ್ರಮಣಗಳನ್ನು ಗುರುತಿಸುವುದು ಹಾಗೂ ವರದಿಯನ್ನು ಸಲ್ಲಿಸುವುದು. ಈ ವರದಿಯಲ್ಲಿ ಅತಿಕ್ರಮಣದ ವ್ಯಾಪ್ತಿ, ಭಾಗವಹಿಸಿದ ವ್ಯಕ್ತಿಗಳು ಮತ್ತು ಸ್ಥಳೀಯ ಪರಿಸರ ಮತ್ತು ಸಮುದಾಯದ ಮೇಲೆ ಪರಿಣಾಮ ಉಂಟು ಮಾಡಿರುವ ವಿವರಗಳನ್ನು ತಿಳಿಸಬೇಕು ಎಂದು ಸೂಚಿಸಿದ್ದಾರೆ.

ಅತಿಕ್ರಮಣಗಳನ್ನು ಗುರುತಿಸಿದ ಕೂಡಲೇ ತೆರವೊಗೊಳಿಸಲು ಕ್ರಮ ಕೈಗೊಳ್ಳುವುದು. ಈ ಕಾರ್ಯಚರಣೆಗಾಗಿ ಸಂಬಂಧಿಸಿದ ಎಲ್ಲಾ ಸ್ಥಳೀಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸುವುದು ಹಾಗೂ ತೆರವು ಕಾರ್ಯಚರಣೆಯನ್ನು ಸುಗಮವಾಗಿ ಮತ್ತು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಗುರುತಿಸಿದ ಅತಿಕ್ರಮಣಗಳ ತೆರವು ಕಾರ್ಯವನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಿ ಅನುಪಾಲನಾ ವರದಿಯನ್ನು ಪಡೆದುಕೊಳ್ಳುವುದು ಎಂದು ನಿರ್ದೇಶನ ನೀಡಿದ್ದಾರೆ.

ಅತಿಕ್ರಮಣಗಳ ತೆರವು ಪ್ರಕ್ರಿಯೆಯ ಪ್ರಗತಿಯನ್ನು ತಿಂಗಳಿಗೊಮ್ಮೆ ಮೇಲ್ವಿಚಾರಣೆ ನಡೆಸಿ (ಟ್ಞಜಿಠಿಟ್ಟಜ್ಞಿಜ ಕ್ಟೃಟಜ್ಟಛಿ) ತೆರವು ಕಾರ್ಯಚರಣೆ ಕೈಗೊಳ್ಳುವಲ್ಲಿ ಏನಾದರೂ ಸವಾಲುಗಳು ಇದ್ದಲ್ಲಿ, ಅವುಗಳನ್ನು ಸಕ್ಷಮ ಪ್ರಾಧಿಕಾರದ ಗಮನಕ್ಕೆ ತಂದು ಮುಂದಿನ ಕ್ರಮವಹಿಸುವುದು ಎಂದು ಸಚಿವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net