ಸಾರಿಗೆ ನೌಕರರ 'ಸರ್ಕಾರಿ' ಬೇಡಿಕೆಗೆ ತೊಡಕು

govt bus protest
Published on

ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿಸಲು ಸರ್ಕಾರ ಒಪ್ಪದೇ ಇರುವುದಕ್ಕೆ ಆರ್ಥಿಕ ಹೊರೆಯಷ್ಟೇ ಕಾರಣವಲ್ಲ. ಜತೆಗೆ ನಿಗಮಗಳ ರದ್ದು ಸೇರಿ ಇನ್ನಿತರ ವಿಷಯಗಳೂ ಇವೆ.

ಆಂಧ್ರಪ್ರದೇಶ ಮಾದರಿಯಲ್ಲಿ ತಮ್ಮನ್ನೂ ಸರ್ಕಾರಿ ನೌಕರರನ್ನಾಗಿಸುವಂತೆ ಆಗ್ರಹಿಸಿ 1.26 ಲಕ್ಷ ಸಾರಿಗೆ ನೌಕರರು ಮುಷ್ಕರಕ್ಕೆ ಇಳಿದಿದ್ದಾರೆ. ಈ ಬೇಡಿಕೆ ಈಡೇರಿಸಿದರೆ ವೇತನ, ಭತ್ಯೆ, ಬಸ್​ಗಳ ನಿರ್ವಹಣೆಗಳಿಂದಾಗಿ ವಾರ್ಷಿಕ 6,500 ಕೋಟಿ ರೂ. ಹೊರೆ ಬೀಳುವ ಅಂದಾಜಿದೆ. ಜತೆಗೆ ಇನ್ನಷ್ಟು ಕಾರಣ ಮತ್ತು ಸವಾಲು ಸರ್ಕಾರದ ಮುಂದೆ ಎದುರಾಗಲಿದ್ದು, ಅದನ್ನು ನಿಭಾಯಿಸುವುದು ಕಷ್ಟ ಎನ್ನುವ ಸಲುವಾಗಿ ಈ ಬೇಡಿಕೆಯನ್ನು ಒಪ್ಪಿಲ್ಲ ಎನ್ನಲಾಗುತ್ತಿದೆ.

ನಷ್ಟದಲ್ಲಿರುವ ನಿಗಮಗಳು: ಲಾಭ ಮತ್ತು ನಷ್ಟದ ಲೆಕ್ಕಾಚಾರ ಹಾಕದೆ, ಸರ್ಕಾರ ರಾಜ್ಯದಲ್ಲಿ 22 ಸಾವಿರಕ್ಕೂ ಹೆಚ್ಚಿನ ಬಸ್​ಗಳ ಮೂಲಕ ಸಾರಿಗೆ ಸೇವೆ ನೀಡುತ್ತಿವೆ. ಡೀಸೆಲ್ ಬೆಲೆ ಏರಿಕೆ, 4 ವರ್ಷಗಳ ಹಿಂದೆ ಮಾಡಲಾದ ನೌಕರರ ವೇತನ ಮತ್ತು ಭತ್ಯೆ ಹೆಚ್ಚಳ ಸೇರಿ ಇನ್ನಿತರ ಕಾರಣಗಳಿಂದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳೂ ನಷ್ಟದಲ್ಲಿವೆ. ಅದರಲ್ಲೂ ಕರೊನಾ ನಂತರ ನಷ್ಟ ಪ್ರಮಾಣ ಹೆಚ್ಚಾಗಿದ್ದು, ಸದ್ಯ ನಾಲ್ಕೂ ನಿಗಮಗಳು 2 ಸಾವಿರ ಕೋಟಿ ರೂ.ಗೂ ಹೆಚ್ಚಿನ ನಷ್ಟ ಅನುಭವಿಸುತ್ತಿವೆ. ಈ ಎಲ್ಲ ಸೇರಿ ಈವರೆಗೆ ನಿಗಮಗಳು 5 ಸಾವಿರ ಕೋಟಿ ರೂ.ಗೂ ಹೆಚ್ಚಿನ ಹೊಣೆಗಾರಿಕೆ ಹೊಂದಿವೆ.

ಸರ್ಕಾರದ್ದೇ ಹೊಣೆ: ಆರ್ಥಿಕ ಹೊರೆ ಜತೆಗೆ ಈಗಿರುವ ನಾಲ್ಕೂ ನಿಗಮಗಳನ್ನು ರದ್ದು ಮಾಡಬೇಕಾಗುತ್ತದೆ. ಅದರ ಬದಲು ಸರ್ಕಾರದ (ಸಾರಿಗೆ ಇಲಾಖೆ) ಮೇಲುಸ್ತುವಾರಿಯಲ್ಲಿ ಸಾರಿಗೆ ಸೇವೆ ನೀಡಬೇಕಾಗುತ್ತದೆ. ನಿಗಮಗಳಲ್ಲಿನ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯ ಹುದ್ದೆಗಳನ್ನು ರದ್ದು ಮಾಡಬೇಕಾಗುತ್ತದೆ. ಈಗಿರುವ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾಯಿಸಬೇಕಾಗುತ್ತದೆ.

ಶೇ.40 ಹೆಚ್ಚಾಗಲಿದೆ ವೇತನ: ಸಾರಿಗೆ ನೌಕರರು ಮತ್ತು ಸರ್ಕಾರ ನೌಕರರ ನಡುವೆ ವೇತನ ಪ್ರಮಾಣದಲ್ಲಿ ಶೇ.40 ಅಂತರವಿದೆ. ಅದನ್ನು ಸರಿದೂಗಿಸಿದರೆ, ಈಗಿರುವ ವೇತನ ಹೆಚ್ಚಾಗಲಿದೆ. ಜತೆಗೆ ವೇತನ ಆಯೋಗದ ಶಿಫಾರಸು ಸಾರಿಗೆ ನೌಕರರಿಗೂ ಅನ್ವಯವಾಗಲಿವೆೆ. ಅದು ಬಹುದೊಡ್ಡ ಆರ್ಥಿಕ ಹೊರೆಯಾಗಲಿದೆ. ಅದೇ ರೀತಿ ಆಸ್ಪತ್ರೆಗಳಲ್ಲಿ ಉಚಿತ ಸೇವೆ, ರಜೆ ದಿನ 10ರಿಂದ 28ಕ್ಕೆ ಹೆಚ್ಚಳ, ಪಿಂಚಣಿ ಸೇರಿ ಇನ್ನಿತರ ವ್ಯವಸ್ಥೆ ನೀಡಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net