

ನವದೆಹಲಿ: ಭಾರತದ ಭೂಭಾಗಕ್ಕೆ ಸಂಬಂಧಿಸಿದ ವಿವಾದಿತ ಭೂಪಟ ಬಳಸಿದ ಕಾರಣ ವಿಕಿಪೀಡಿಯಾವನ್ನು ಕೇಂದ್ರ ಸರ್ಕಾರ ಬ್ಲಾಕ್ ಮಾಡಲಿದೆಯೇ? ಹೀಗೊಂದು ಸಂದೇಹ ವಿಕಿಪೀಡಿಯಾ ಬಳಸುವವರ ಪೈಕಿ ಅನೇಕರನ್ನು ಕಾಡಿದೆ. ಇದಕ್ಕೆ ಕಾರಣವಾಗಿರುವುದು ಕೇಂದ್ರ ಸರ್ಕಾರದ ಸೂಚನೆ.
ಇತ್ತೀಚೆಗಷ್ಟೇ ಲೇಹ್ ಭಾಗವನ್ನು ಲಡಾಖ್ ಜತೆಗೆ ತೋರಿಸದೇ ಜಮ್ಮು-ಕಾಶ್ಮೀರದ ಜತೆಗೆ ತೋರಿಸಿರುವ ಮ್ಯಾಪ್ ಅಪ್ಲೋಡ್ ಮಾಡಿದ್ದ ಟ್ವಿಟರ್ ಗೆ ಕೇಂದ್ರ ಸರ್ಕಾರ ಖಡಕ್ ಸಂದೇಶ ರವಾನಿಸಿದ್ದು, ಸಂಸದೀಯ ಸಮಿತಿ ಎದುರು ವಿಚಾರಣೆಗೂ ಹಾಜರಾಗುವಂತೆ ಮಾಡಿತ್ತು. ಅಲ್ಲದೆ, ಅದನ್ನು ತೆಗೆದುಹಾಕುವಂತೆ ಸೂಚಿಸಿತ್ತು. ಇಂಥದ್ದೇ ಎಡವಟ್ಟನ್ನು ಈಗ ವಿಕಿಪೀಡಿಯಾ ಮಾಡಿದ್ದು, ಜಮ್ಮು ಕಾಶ್ಮೀರದ ಸರಿಯಾದ ಭೂಪಟವನ್ನು ವಿಕಿಪೀಡಿಯಾದಲ್ಲಿ ಪ್ರದರ್ಶಿಸುವಂತೆ ನಿರ್ದೇಶಿಸಿದೆ.
ಇದನ್ನೂ ಓದಿ: ಉಗ್ರ ಗೋಡೆ ಬರಹ, ಓರ್ವನ ಬಂಧನ
ವಿಕಿಪೀಡಿಯಾದ ಭಾರತ-ಭೂತಾನ್ ಬಾಂಧವ್ಯಕ್ಕೆ ಸಂಬಂಧಿಸಿ ಪುಟದಲ್ಲಿ ಲಿಂಕ್ ಆಗಿರುವ ಭೂಪಟದಲ್ಲಿ ಅಕ್ಸಾಯ್ ಚಿನ್ ಪ್ರದೇಶವನ್ನು ಚೀನಾದ್ದೆಂದು ತೋರಿಸಲಾಗಿದೆ. ಇದನ್ನು ಕೂಡಲೇ ತೆಗೆದು ಸರಿಯಾದ ಭೂಪಟ ಬಳಸುವಂತೆ ಕೇಂದ್ರ ಇಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ನವೆಂಬರ್ 27ರಂದು ಸೂಚಿಸಿತ್ತು. ವಿಕಿಪೀಡಿಯಾ ಭೂಪಟ ಬದಲಿಸುವ ಮತ್ತು ತಪ್ಪು ಸರಿಪಡಿಸುವುದಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳದೇ ಹೋದರೆ ವೆಬ್ಸೈಟ್ ಬ್ಲಾಕ್ ಮಾಡುವುದು ಸೇರಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸಚಿವಾಲಯಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)