

ಬೆಂಗಳೂರು: ಸುಪ್ರೀಂ ಕೋರ್ಟ್ ಅಂಗಳದಲ್ಲಿರುವ ಕಾವೇರಿ ನೀರಿನ ಬಿಕ್ಕಟ್ಟಿಗೆ ಮಳೆಯೊಂದೇ ಪರಿಹಾರವಾಗಿದೆ. ಇದೇ ನಿರೀಕ್ಷೆಯಲ್ಲಿರುವ ಸರ್ಕಾರದ ಜತೆಗೆ ರೈತರು ಸಮಾಧಾನಪಡುವ ಮುನ್ಸೂಚನೆ ಲಭಿಸಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಕೆಲವೆಡೆ ಮಳೆಯಾಗುತ್ತಿದೆ. ಮುಂದುವರಿಯುವ ಸಂಭವವಿದೆ. ಹೆಚ್ಚಿನ ಮಳೆಯಾದರೆ ಜಲಾಶಯಗಳ ಒಳಹರಿವು ಚೇತರಿಸಿಕೊಳ್ಳಲಿದ್ದು, ತಮಿಳುನಾಡಿನ ತಗಾದೆ ಸಲೀಸಾಗಿ ಬಗೆಹರಿಯಲಿದೆ ಎನ್ನುವುದು ಸರ್ಕಾರದ ಆಶಾಭಾವನೆಯಾಗಿದೆ.
ಮಳೆ ಕೊರತೆಯಿಂದಾಗಿ ತಲೆದೋರಿದ ಸಂಕಷ್ಟವನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸರ್ಕಾರ ವಿವರಿಸಿದೆ. ಕಾವೇರಿ ಕೊಳ್ಳದ ಜಲಾಶಯಗಳಿಂದ ಸೆ.12ರ ಬಳಿಕ ನೀರು ಬಿಡುವ ಸ್ಥಿತಿಯಲ್ಲಿಲ್ಲ ಎಂಬುದನ್ನು ನಿವೇದಿಸಿಕೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಕಾವೇರಿ ವ್ಯಾಜ್ಯದ ಬಗ್ಗೆ ಚರ್ಚೆಯಾಗಿದೆ. ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಕಾನೂನಾತ್ಮಕ ತೊಡಕು, ರೈತರ ರಕ್ಷಣೆಗಾಗಿ ಕೈಗೊಂಡಿರುವ ಕ್ರಮಗಳು, ಕಾನೂನು ಮತ್ತು ತಜ್ಞರ ತಂಡಗಳ ಸನ್ನದ್ಧ ಸ್ಥಿತಿ ಕುರಿತು ವಿವರಿಸಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಖಚಿತಪಡಿಸಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯಾವುದೇ ಸರ್ಕಾರವಿರಲಿ, ರಾಜ್ಯದ ರೈತರ ಹಿತರಕ್ಷಣೆಗಾಗಿ ಕೆಲಸ ಮಾಡುತ್ತದೆ. ಕಾಂಗ್ರೆಸ್ ಸರ್ಕಾರ ಕೂಡ ಅದಕ್ಕೆ ಬದ್ಧವಾಗಿದ್ದು, ರೈತರ ರಕ್ಷಣೆ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದೆ ಎಂದು ಸಮರ್ಥಿಸಿಕೊಂಡರು.
ತಮಿಳುನಾಡಿಗೆ 26 ಟಿಎಂಸಿ ಅಡಿ ನೀರು ಪೂರೈಸಿದ ನಂತರ ರಾಜ್ಯದ ರೈತರ ಹಿತರಕ್ಷಣೆಗೆ ಬದ್ಧ ಎನ್ನುವುದು ರಾಜಕೀಯ ಹೇಳಿಕೆಯಲ್ಲವೆ ? ಇದರಿಂದ ರೈತ ಹಿತ ಕಾಪಾಡಿದಂತಾಯಿತೆ ? ಎಂಬ ಮಾಧ್ಯಮದವರ ಪ್ರಶ್ನೆಗೆ ನೇರವಾಗಿ ಪ್ರತಿಕ್ರಿಯಿಸಲು ಎಚ್.ಕೆ.ಪಾಟೀಲ್ ನಿರಾಕರಿಸಿದರು.
ಸುಪ್ರೀಂ ಕೋರ್ಟ್‌ನಲ್ಲಿ ವ್ಯಾಜ್ಯದ ವಿಚಾರಣೆ ನಡೆಯುತ್ತಿದೆ. ಈ ಹಂತದಲ್ಲಿ ಏನೇ ಹೇಳಿದರೂ ಗೊಂದಲ ಸೃಷ್ಟಿಯಾಗುತ್ತದೆ. ರೈತರ ರಕ್ಷಣೆಗಾಗಿ ಸರ್ಕಾರ ಹೆಜ್ಜೆ ಹಾಕುತ್ತಿದೆ ಎಂದಷ್ಟೇ ಹೇಳಬಲ್ಲೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದೆ ಎಂಬ ಸಂತಸಪಡುವ ಮಾಹಿತಿ ಲಭಿಸಿದೆ ಎಂದು ಹಂಚಿಕೊಂಡರು.