ಗ್ರಾಪಂ ಖಾಲಿ ಹುದ್ದೆಗೆ ನೇಮಕಕ್ಕೆ ಸರ್ಕಾರ ಅಸ್ತು

vidhanasoudha
Published on

ಬೆಂಗಳೂರು: ಗ್ರಾಮ ಪಂಚಾಯತಿಗಳಲ್ಲಿ ಖಾಲಿಯಾಗಿರುವ ಕರವಸೂಲಿಗಾರರರು, ಕ್ಲರ್ಕ ಕಂ ಡೇಟಾ ಎಂಟ್ರಿ ಆಪರೇಟರ್, ವಾಟರ್ ಆಪರೇಟರ್ ಹಾಗೂ ಸ್ವಚ್ಚತಾಗಾರರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಆದೇಶ ಹೊರಡಿಸಿದೆ.

ವಯೋನಿವೃತ್ತಿ, ಮುಂಬಡ್ತಿ ಅಥವಾ ಮರಣಹೊಂದಿರುವ ಕಾರಣಗಳಿದ ನಾಲ್ಕೂ ವೃಂದದಲ್ಲಿ ಯಾರೂ ಕಾರ್ಯನಿರ್ವಹಿಸದೇ ಇದ್ದಲ್ಲಿ ಒಂದು ಹುದ್ದೆಗೆ ಮಾತ್ರ ನೇಮಕ ಮಾಡಿಕೊಳ್ಳಲು ಸರ್ಕಾರ ಒಪ್ಪಿಗೆ ನೀಡಿದೆ.

ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸಿಬ್ಬಂದಿಯ ಸ್ವರೂಪ, ವೇತನ ಶ್ರೇಣಿಗಳು, ನೇಮಕಾತಿ ವಿಧಾನ ಮತ್ತು ಸೇವಾ ಷರತ್ತುಗಳ ಬಗ್ಗೆ ರಚಿಸಿರುವ ನಿಯಮಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಯ ಹುದ್ದಗಳ ಸಂಖ್ಯೆಯನ್ನು ಪ್ರತ್ಯೇಕವಾದ ಸರ್ಕಾರಿ ಆದೇಶದಲ್ಲಿ ಒದಗಿಸಲಾಗುತ್ತದೆ.

ಪ್ರಸ್ತುತ ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಸಿಬ್ಬಂದಿ ಸಂಖ್ಯೆಯನ್ನು ನಿಗದಿಪಡಿಸುವ ಬಗ್ಗೆ ನಿಯಮಗಳಲ್ಲಿ ತಿದ್ದುಪಡಿ ತರುವ ಪ್ರಸ್ತಾವನೆಯು ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿರುವುದರಿಂದ ಎಲ್ಲ ಜಿಲ್ಲಾ ಪಂಚಾಯತಿಗಳು ಮುಂದಿನ ಆದೇಶದವರೆಗೆ ಗ್ರಾಮ ಪಂಚಾಯತಿ ಸಿಬ್ಬಂದಿಗಳ ಸಂಖ್ಯೆಯನ್ನು ನಿಗದಿಪಡಿಸುವ ಕುರಿತಾಗಿ ಯಾವುದೇ ಕ್ರಮ ಕೈಗೊಳ್ಳಕೂಡದು.

ಗ್ರಾ.ಪಂ. ಸಿಬ್ಬಂದಿಗಳಾದ ಕರ ವಸೂಲಿಗಾರರು, ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್‌ರರು, ವಾಟರ್ ಆಪರೇಟರ್ ಹಾಗೂ ಸ್ವಚ್ಛತಾಗಾರರ ಹುದ್ದೆಗಳಿಗೆ ಜಿಲ್ಲಾ ಪಂಚಾಯಿತಿಯಿಂದ ಈಗಾಗಲೇ ಅನುಮೋದನೆ ಹೊಂದಿರುವ ನೌಕರರ ವಯೋನಿವೃತ್ತಿ, ಮುಂಬಡ್ತಿ ಅಥವಾ ಮರಣಹೊಂದಿರುವ ಕಾರಣಗಳಿಂದ ಖಾಲಿಯಾಗಿದ್ದಲ್ಲಿ, ಗ್ರಾಮ ಪಂಚಾಯತಿಯ ಸಿಬ್ಬಂದಿ ವರ್ಗದ ಮಾದರಿಯಲ್ಲಿ ಖಾಲಿಯಾದ ಈ ಮೇಲಿನ ನಾಲ್ಕು ವೃಂದದ ಹುದ್ದೆಗಳಲ್ಲಿ ಯಾರೂ ಕಾರ್ಯನಿರ್ವಹಿಸದೇ ಇದ್ದಲ್ಲಿ, ಅಂತಹ ಹುದ್ದೆಗೆ ಒಂದು ಸಿಬ್ಬಂದಿಯನ್ನು ಸರ್ಕಾರದ ನಿಯಮಾನುಸಾರ ನೇಮಕಾತಿ ಮಾಡಿಕೊಳ್ಳಲು ಹಾಗೂ ಮೀಸಲಾತಿಯನ್ನು ಕಡ್ಡಾಯವಾಗಿ ಅನುಸರಿಸಲು ಎಲ್ಲ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net