ಕ್ರೀಡಾ ಸಾಧಕರಿಗೆ ಉನ್ನತ ಹುದ್ದೆ; ನೇರ ನೇಮಕಾತಿಗೆ ಅವಕಾಶ | ಸಿಎಂ ಬೊಮ್ಮಾಯಿ ಘೋಷಣೆ

8798
Published on

ಬೆಂಗಳೂರು: ಕ್ರೀಡಾ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ನೇತೃತ್ವದ ಆಯ್ಕೆ ಸಮಿತಿ ಮೂಲಕ ಕ್ರೀಡಾಪಟುಗಳಿಗೆ ನೇರ ನೇಮಕಾತಿ ಮೂಲಕ ಸರ್ಕಾರಿ ಉದ್ಯೋಗ ನೀಡುವ ಯೋಜನೆಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ರಾಜಭವನದಲ್ಲಿ ಮಂಗಳವಾರ ರಾಜ್ಯಪಾಲ ಥಾವರಚಂದ್ ಗೆಹಲೋಟ್ ಅವರೊಂದಿಗೆ ಏಕಲವ್ಯ ಹಾಗೂ ಇತರ ಕ್ರೀಡಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಒಲಿಂಪಿಕ್ ಹಾಗೂ ಪ್ಯಾರಾ ಒಲಿಂಪಿಕ್ ಪದಕ ವಿಜೇತ ಪದವೀಧರರಿಗೆ ಗ್ರೂಪ್ ಎ ಉದ್ಯೋಗ ನೀಡಲಾಗುವುದು. ಏಷ್ಯನ್ ಗೇಮ್ಸ್ ಹಾಗೂ ಕಾಮನ್ವೆಲ್ತ್ ಪದಕ ವಿಜೇತ ಪದವೀಧರರಿಗೆ ಗ್ರೂಪ್ ಬಿ ಉದ್ಯೋಗ, ಇದಕ್ಕಿಂತ ಕಡಿಮೆ ಸ್ತರದ ಕ್ರೀಡಾಕೂಟದ ಪದಕ ವಿಜೇತರಿಗೆ ಗ್ರೂಪ್ ಸಿ ಹಾಗೂ ಗ್ರೂಪ್

ಡಿ ಉದ್ಯೋಗ ನೀಡಲಾಗುವುದು ಎಂದು ವಿವರಿಸಿದರು. ಅಂತೆಯೇ, ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ನೀಡುವ ನೀತಿ ಕರ್ನಾಟಕದ ಹೊರತು ಬೇರೆ ರಾಜ್ಯದಲ್ಲಿಲ್ಲ ಎಂದು ಹೇಳಿದರು.

ಗ್ರಾಮೀಣ ಕ್ರೀಡೆಗೆ ಪೋ›ತ್ಸಾಹ: ಗ್ರಾಮಗಳಲ್ಲಿ ನಿಜವಾದ ಕ್ರೀಡಾಪ್ರತಿಭೆಗಳಿದ್ದು, ಅವರಿಗೆ ಸೂಕ್ತ ತರಬೇತಿ ನೀಡಿದಲ್ಲಿ ಮಹತ್ತರ ಸಾಧನೆಗಳನ್ನು ಮಾಡಲು ಶಕ್ತರಾಗಿರುತ್ತಾರೆ. ಆದ್ದರಿಂದ ಗ್ರಾಮ, ತಾಲ್ಲೂಕು, ಜಿಲ್ಲಾಪಂಚಾಯಿತಿ ಹಂತಗಳಲ್ಲಿ ಗ್ರಾಮೀಣ ಕ್ರೀಡಾಕೂಟವನ್ನು ಈ ವರ್ಷದಿಂದ ಪ್ರಾರಂಭಿಸಲಾಗಿದ್ದು, ಖೋಖೋ, ಕಬಡ್ಡಿ, ಕುಸ್ತಿ, ವಾಲಿಬಾಲ್, ಕಂಬಳದಂತಹ ಕ್ರೀಡೆಗಳನ್ನು ಪೋ›ತ್ಸಾಹಿಸಲಾಗುತ್ತಿದೆ ಎಂದರು.

ರಾಜ್ಯ ಸರ್ಕಾರವು ವಿವಿಧ ಯೋಜನೆಗಳ ಮೂಲಕ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುತ್ತಿದೆ. ವಿವಿಧ ಹಂತಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಪ್ರಶಸ್ತಿ ನೀಡುವುದರೊಂದಿಗೆ ಅಂತಾರಾಷ್ಟ್ರೀಯ ಮಟ್ಟದ ಆಧುನಿಕ ಕ್ರೀಡಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಕರ್ನಾಟಕವನ್ನು ಅಂತಾರಾಷ್ಟ್ರೀಯ ಕ್ರೀಡಾ ಹಬ್ ಮಾಡುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ ಹೊಸ ಶಿಕ್ಷಣ ನೀತಿ ಪರಿಚಯಿಸುವುದರೊಂದಿಗೆ, ಕ್ರೀಡೆಯನ್ನು ಪಠ್ಯಕ್ರಮದ ಭಾಗವನ್ನಾಗಿ ಮಾಡಲಾಗಿದೆ.

| ಥಾವರಚಂದ್ ಗೆಹಲೋಟ್ ರಾಜ್ಯಪಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net