ಪೊಲೀಸ್ ವರ್ಗಾವಣೆ ಅಸಮಧಾನಕ್ಕೆ ಪರಿಷ್ಕೃತ ಪಟ್ಟಿ ಹೊರಡಿಸಿದ ಸರ್ಕಾರ; 6 ಡಿವೈಎಸ್‌ಪಿಗಳು, 40 ಇನ್‌ಸ್ಪೆಕ್ಟರ್‌ಗಳ ವರ್ಗಾ

Police (4)
Published on

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಪೊಲೀಸ್ ವರ್ಗಾವಣೆ ವಿಚಾರವಾಗಿ ಉಂಟಾಗಿದ್ದ ಆಂತರಿಕ ಅಸಮಧಾನಕ್ಕೆ ತಡೆ ನೀಡಲಾಗಿದ್ದ ಆದೇಶವನ್ನು ಪರಿಷ್ಕರಣೆ ಮಾಡಿ ಬುಧವಾರ ಹೊಸ ಆದೇಶ ಹೊರಡಿಸಲಾಗಿದೆ.

ಪರಿಷ್ಕೃತ ಆದೇಶದಲ್ಲಿ ಮೂವರು ಡಿವೈಎಸ್‌ಪಿಗಳಿಗೆ ಸ್ಥಾನ ತೋರಿಸಿದ್ದು, ಮೂವರು ವರ್ಗಾವಣೆ ರದ್ದುಪಡಿಸಲಾಗಿದೆ. ಅದೇ ರೀತಿ 40 ಇನ್‌ಸ್ಪೆಕ್ಟರ್‌ಗಳ ಆದೇಶದಲ್ಲಿ 12 ಪಿಐಗಳ ವರ್ಗಾವಣೆ ರದ್ಧುಪಡಿಸಿ ಹೊಸದಾಗಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.

ಡಿವೈಎಸ್‌ಪಿಗಳಾದ ಎಂ.ಎಚ್.ಮಂಜುನಾಥ್ ಚೌದರಿ- ಎಸಿಪಿ ಸಿಸಿಬಿ, ಟಿ. ರಂಗಪ್ಪ-ಎಸಿಪಿ ಸಂಪಿಗೆಹಳ್ಳಿ ಉಪ ವಿಭಾಗ, ಪಿ.ರವಿ-ಡಿವೈಎಸ್‌ಪಿ ದೊಡ್ಡಬಳ್ಳಾಪುರ ಉಪವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಇನ್ನೂ ಡಿವೈಎಸ್‌ಪಿಗಳಾದ ಮೊಹಮ್ಮದ್ ಹಶ್ಮತ್ ಖಾನ್, ಪ್ರಶಾಂತ್ ಜಿ. ಮುನೋಳ್ಳಿ ಮತ್ತು ಎಂ.ಮುರುಗೇಂದ್ರಯ್ಯ ವರ್ಗಾವಣೆ ರದ್ಧುಪಡಿಸಲಾಗಿದೆ.

ಇದಲ್ಲದೆ, ಆಗಸ್ಟ್ 1ರಂದು 211 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿತ್ತು. ಇದರ ವಿರುದ್ಧ ಕಾಂಗ್ರೆಸ್ ಸಂಸದ ಮತ್ತು ಶಾಸಕರು, ಸಚಿವರ ವಿರುದ್ಧ ಅಸಮಧಾನ ವ್ಯಕ್ತವಾಗಿತ್ತು. ತಕ್ಷಣ ಎಚ್ಚೆತ್ತ ಸರ್ಕಾರ 211ರ ಪಟ್ಟಿಯಲ್ಲಿ ಬೆಂಗಳೂರು ನಗರ ಕಮಿಷನರೇಟ್ 69 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆಗೆ ತಡೆ ನೀಡಿತ್ತು. ಇದೀಗ ಈ ಪೈಕಿ 40 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಪರಿಷ್ಕರಣೆ ಮಾಡಿ ಆದೇಶಿಸುವ ಮೂಲಕ ಅಸಮಧಾನವನ್ನು ಶಮನ ಮಾಡಲಾಗಿದೆ.

ಇದೀಗ 40 ಪಿಐಗಳ ಪೈಕಿ 12 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಆದೇಶವನ್ನು ರದ್ದುಪಡಿಸಲಾಗಿದೆ. ಉಳಿದವರಲ್ಲಿ ಕೆಲವರನ್ನು ಅದೇ ಸ್ಥಳದಲ್ಲಿ ಮುಂದುವರಿಸಿದ್ದು, ಕೆಲವರಿಗೆ ಹೊಸ ಪೊಲೀಸ್ ಠಾಣೆಗೆ ನಿಯೋಜನೆ ಮಾಡಲಾಗಿದೆ. ಉಳಿದಂತೆ 211 ಪಿಐಗಳ ವರ್ಗಾವಣೆ ಪಟ್ಟಿಯಲ್ಲಿ ಮೌಖಿಕವಾಗಿ ತಡೆ ನೀಡಲಾಗಿದ್ದವರು ಹಳೆಯ ಆದೇಶದಂತೆ ಅಧಿಕಾರ ಸ್ವೀಕರಿಸಬಹುದು ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net