

ಬೆಂಗಳೂರು: ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಮೀಸಲಿದ್ದ ಹಣವನ್ನು ಅನ್ಯ ಕಾರ್ಯಗಳಿಗೆ ಬಳಸಿಕೊಂಡರು. ಇದೀಗ ಕಾರ್ಮಿಕರ ಸರದಿ ಎಂಬಂತೆ ಕಟ್ಟಡ ಕಾರ್ಮಿಕರ ಮಕ್ಕಳ ನಿಧಿಗೂ ಕಾಂಗ್ರೆಸ್ ಸರ್ಕಾರ ಕೈಹಾಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ.
ಕಾರ್ಮಿಕರ ನಿಧಿ ಬೇರೆ ಬಳಸಿಕೊಂಡ ಸರ್ಕಾರದ ನಡೆಗೆ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದ ವರದಿಯನ್ನು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ವಿಜಯೇಂದ್ರ ಸಂದೇಶದ ಜತೆಗೆ ಹಂಚಿಕೊಂಡಿದ್ದಾರೆ.
ಗ್ಯಾರಂಟಿ ಯೋಜನೆಗಳ ಜಾತ್ರೆಯಲ್ಲಿ ಮುಳುಗಿ ಒಂದೇ ಒಂದು ಯೋಜನೆ ಜಾರಿಗೊಳಿಸಿಲ್ಲ. ಯಾವೊಂದು ಹೊಸ ಕಾಮಗಾರಿಗಳಿಗೆ ಚಾಲನೆ ನೀಡದ ಆಡಳಿತಯಂತ್ರಕ್ಕೆ ತುಕ್ಕು ಹಿಡಿದಿರುವ ಈ ಸರ್ಕಾರದಲ್ಲಿ ಎಸ್.ಟಿ. ಅಭಿವೃದ್ಧಿ ನಿಗಮದ ಹಣ ಲೂಟಿಯಾಯಿತು.
ಬೊಕ್ಕಸ ಬರಿದು ಮಾಡಿಕೊಂಡಿದೆ. ಇದೀಗ ಕಟ್ಟಡ ಕಾರ್ಮಿಕರ ಬಡ ಮಕ್ಕಳ ಶಿಕ್ಷಣ ಹಾಗೂ ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟ ಹಣಕ್ಕೂ ಕೈಹಾಕಿದೆ. ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿಯಲ್ಲಿ ಮೀಸಲಿಟ್ಟ ಹಣವನ್ನು ಇತರೆ ಉದ್ದೇಶಗಳಿಗೆ ಬಳಕೆ ಮಾಡಿರುವುದು ದೌರ್ಭಾಗ್ಯವಲ್ಲದೆ ಮತ್ತೇನೂ ಅಲಲ್ವೆಂದು ಟೀಕಿಸಿದ್ದಾರೆ.
ಅಭಿವೃದ್ಧಿಶೂನ್ಯ ಕಾಂಗ್ರೆಸ್ ಸರ್ಕಾರಕ್ಕೆ ಅಂಟಿರುವ ಭ್ರಷ್ಟಾಚಾರ, ಅಧಿಕಾರದ ವ್ಯಾಮೋಹ, ಭಂಡತನಕ್ಕೆ ಜನರೇ ತಕ್ಕಪಾಠ ಕಲಿಸುವ ಕಾಲ ದೂರವಿಲ್ಲ ಎಂದು ಬಿ.ವೈ.ವಿಜಯೇಂದ್ರ ಎಚ್ಚರಿಸಿದ್ದಾರೆ.