

ಬೆಂಗಳೂರು:
ಗ್ಯಾರಂಟಿ ಯೋಜನೆಗಳಿಂದ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣ ಸಾಧ್ಯವಾಗಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಅವರು ಪ್ರತಿಪಾದಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ಯಾರಂಟಿ ಕೊಟ್ಟಾಗ ಸರ್ಕಾರ ದಿವಾಳಿ ಆಗಲಿದೆ ಎಂದು ಟೀಕಿಸಿದ್ದವರೇ ಇಂದು ಬೇರೆ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆ ಜಾರಿ ಮಾಡುತ್ತಿದ್ದಾರೆ ಎಂದರು.
ಐದು ಗ್ಯಾರಂಟಿಯಲ್ಲಿ ಶಕ್ತಿ ಯೋಜನೆ ದೇಶದಲ್ಲಿ ಅತ್ಯುತ್ತಮ ಯೋಜನೆಯಾಗಿದೆ 500 ಕೋಟಿ ಮೀರಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ ಅರ್ಥ ಶಾಸ್ತ್ರಜ್ಞರಾದ ಅಮೃತ್ ಸೇನ್, ಅಭಿಜಿತ್ ಬ್ಯಾನರ್ಜಿ ಅವರುಗಳೇ ಹೊಗಳಿದ್ದಾರೆ ಎಂದರು.
ಹಣ ಎಲ್ಲ ವರ್ಗದ ಜನರ ಕೈ ಸೇರುವ ಮೂಲಕ ಆರ್ಥಿಕತೆ ಹಾಗೂ ಉದ್ಯೋಗ ಸೃಷ್ಟಿ ಆಗಲಿದೆ ಗ್ಯಾರಂಟಿ ಯೋಜನೆ ಹಣದಿಂದ ಮಹಿಳೆಯರು ಸ್ವಾವಲಂಭಿಗಳಾಗಿದ್ದಾರೆ ಎಂದರು.
ಗೃಹಲಕ್ಷ್ಮಿ ಯೋಜನೆ ಜಾರಿಗೆ ಕೊಟ್ಟಾಗ, 2 ಸಾವಿರ ಹಣ ಅತ್ತೆಗೆ ಕೊಡ್ತೀರೋ ಸೊಸೆಗೆ ಕೊಡ್ತೀರೋ ಅಂದರು ಆದರೆ ಈಗ ಅವರೇ ಸ್ವಾವಲಂಭಿಗಳಾಗಿದ್ದಾರೆ ಗೃಹಜ್ಯೋತಿ ಕೂಡ ಜನರಿಗೆ ಅನುಕೂಲ ಆಗಿದೆ ಎಂದರು. ಅನ್ನ ಭಾಗ್ಯ, ಯುವನಿಧಿ ಯೋಜನೆ ಕೂಡ ಯಶಸ್ವಿಯಾಗಿದೆ ಎಂದರು.
ಪ್ರಧಾನಿ ಮೋದಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರೂ ಮಾಡಲಿಲ್ಲ. ಆ ಬಗ್ಗೆ ಬಿಜೆಪಿ ಮಾತನಾಡುವುದಿಲ್ಲ. ಆದರೆ, ರಾಜ್ಯದಲ್ಲಿ ಸಿದ್ದರಾಮಯ್ಯ ಅಭಿವೃದ್ಧಿ ಕೆಲಸ ಮಾಡುತ್ತಿದ್ದರೂ, ಏನೂ ಆಗಿಲ್ಲ ಎನ್ನುವಂತೆ ಟೀಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಲಾ ಆದಾಯ ಎರಡು ಲಕ್ಷಕ್ಕೆ ಬಂದಿದೆ ಅಂದರೆ, ಆರ್ಥಿಕ ಸಬಲತೆ ಸುಭದ್ರವಾಗಿದೆ ಎಂದರ್ಥ. ನಾನು ಗುಜರಾತ್ ಕೂಡ ನೋಡಿದ್ದೇನೆ. ನಮಗೆ ಗುಜರಾತ್ ಮಾದರಿ ಬೇಕಿಲ್ಲ. ನಮಗೆ ನಾವೇ ಮಾದರಿ ಎಂದರು.
ಗೃಹ ಲಕ್ಷ್ಮಿ ಹಣ ವಿಳಂಬ ಆಗಿರಬಹುದು, ಆದರೆ ಬಾಕಿ ಯಾವುದು ಇಲ್ಲ, ಎಲ್ಲ ತಿಂಗಳ ಹಣವನ್ನು ಕೊಟ್ಟಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು
ರೇವಣ್ಣ ಹೇಳಿದರು.
ಕಳೆದ ಒಂದು ವರ್ಷದಲ್ಲಿ ಗೃಹಲಕ್ಷಿ ಯೋಜನೆಯಲ್ಲಿ 1.27 ಕೋಟಿ ಜನರಿಗೆ 47,488 ಕೋಟಿ ರೂ ನೀಡಲಾಗಿದೆ. ಗೃಹಜ್ಯೋತಿಯಲ್ಲಿ 1.60 ಕೋಟಿ ಫಲಾನುಭವಿಗಳಿದ್ದು, 15,741 ಕೋಟಿ ರೂ ಕೊಡಲಾಗಿದೆ. ಅನ್ನಭಾಗ್ಯದಲ್ಲಿ 72 ಲಕ್ಷ ಫಲಾನುಭವಿಗಳಿದ್ದು, 11821 ಕೋಟಿ ರೂ ವೆಚ್ಚ ಮಾಡಲಾಗಿದೆ. ಯುವನಿಧಿ ಯೋಜನೆ ಅಡಿಯಲ್ಲಿ 2.41ಲಕ್ಷ ಫಲಾನುಭವಿಗಳಿಗೆ 470.14 ಕೋಟಿ ಅನುದಾನ ನೀಡಲಾಗಿದೆ. ಶಕ್ತಿ ಯೋಜನೆ 5 ಕೋಟಿ ಜನರ ಪ್ರಯಾಣ ಕಂಡಿದೆ ಎಂದು ವಿವರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಪ್ರಕಾಶ್ ರಾಥೋಡ್, ರಮೇಶ್ ಮತ್ತಿತರರು ಇದ್ದರು.