ಸರ್ಕಾರಿ, ಅನುದಾನಿತ ಶಾಲಾ ಮಕ್ಕಳಿಗೆ ಆರು ದಿನ ಮೊಟ್ಟೆ ಭಾಗ್ಯ; ಅಜೀಂ ಪ್ರೇಮ್‍ಜೀ ಫೌಂಡೇಶನ್‍ನಿಂದ ನೆರವು

cmk
Published on

ಬೆಂಗಳೂರು: ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ವಾರದಲ್ಲಿ ಉಚಿತ 6 ದಿನ ಪೂರಕ ಪೌಷ್ಟಿಕ ಆಹಾರ ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

ಅಕ್ಷರ ದಾಸೋಹ ಮಧ್ಯಾಹ್ನ ಉಪಾಹಾರ ಯೋಜನೆ ಅಡಿ ಶಿಕ್ಷಣ ಇಲಾಖೆ ಮತ್ತು ಅಜೀಂ ಪ್ರೇಮ್‍ಜೀ ಫೌಂಡೇಶನ್ ಸಹಯೋಗದಲ್ಲಿ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಫೌಂಡೇಶನ್ ಸಂಸ್ಥಾಪಕ ಅಜೀಂ ಪ್ರೇಮ್‍ಜೀ ಚಾಲನೆ ನೀಡಿದರು. ಬಳಿಕ ಶಿಕ್ಷಣ ಇಲಾಖೆ ಮತ್ತು ಅಜೀಂ ಪ್ರೇಮ್‍ಜೀ ಫೌಂಡೇಶನ್ ಈ ಯೋಜನೆಯ MOUಗೆ ಸಹಿ ಹಾಕಿತು.

1,500 ಕೋಟಿ ರೂ. ವೆಚ್ಚದಲ್ಲಿ 3 ವರ್ಷಗಳ ಕಾಲ ಅಜೀಂ ಪ್ರೇಮ್‍ಜೀ ಸಂಸ್ಥೆ ಮಕ್ಕಳಿಗೆ 4 ದಿನ ಮೊಟ್ಟೆ ನೀಡಲಿದೆ. ಸರ್ಕಾರದಿಂದ ಎರಡು ದಿನ ಮತ್ತು ಅಜೀಂ ಪ್ರೇಮ್‍ಜೀ ಫೌಂಡೇಶನ್‍ನಿಂದ 4 ದಿನ ಸೇರಿ ಒಟ್ಟು 6 ದಿನ ಮಕ್ಕಳಿಗೆ ಮೊಟ್ಟೆ ಸಿಗಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಶಿಕ್ಷಣ ಇಲಾಖೆ ಮತ್ತು ಅಜೀಂ ಪ್ರೇಮ್‍ಜೀ ಫೌಂಡೇಶನ್ ನಡುವೆ MOU ಆಗಿದೆ. ಒಪ್ಪಂದದ ಪ್ರಕಾರ 1500 ಕೋಟಿ ರೂ. ಖರ್ಚು ಮಾಡಿ 3 ವರ್ಷಗಳ ಅವಧಿಗೆ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಈಗಾಗಲೇ ನಾವು ಎರಡು ದಿನ ಮೊಟ್ಟೆ ಕೊಡ್ತಿದ್ದೇವೆ. ಮೊದಲು ಒಂದು ದಿನ ಇತ್ತು ನಾವು ಎರಡು ದಿನ ಕೊಡ್ತಿದ್ದೇವೆ. ಈಗ ಪ್ರೇಮ್‌ಜೀ ದೊಡ್ಡ ಮನಸ್ಸು ಮಾಡಿ ಉಳಿದ 4 ದಿನ ಮೊಟ್ಟೆ ನೀಡುತ್ತಿದ್ದಾರೆ. 55-56 ಲಕ್ಷ ವಿದ್ಯಾರ್ಥಿಗಳಿಗೆ ಪ್ರತಿದಿನ ಮೊಟ್ಟೆಯನ್ನ 3 ವರ್ಷ ಕೊಡಲಾಗುತ್ತದೆ. ಪ್ರೇಮ್‌ಜೀ ಮತ್ತು ಕುಟುಂಬ ವರ್ಗದವರಿಗೆ ಸರ್ಕಾರದ ವತಿಯಿಂದ, ನನ್ನ ಪರವಾಗಿ ಧನ್ಯವಾದ ಹೇಳುತ್ತೇನೆ ಎಂದರು.

ವೈಜ್ಞಾನಿಕವಾಗಿ, ವೈಚಾರಿಕವಾಗಿ ಮಕ್ಕಳು ವಿಕಾಸ ಹೊಂದಬೇಕು. ಆಗ ಮಾತ್ರ ಸಮಾಜಮುಖಿ ಆಗಲು ಸಾಧ್ಯ. ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕಾಗಿ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಆಶಯ. ಈ ಕಾರಣಕ್ಕೆ ಸಮವಸ್ತ್ರ, ಶೂ, ಸಾಕ್ಸ್ ಕೊಡುವ ಜೊತೆಗೆ ಹೆಚ್ಚೆಚ್ಚು ವಸತಿ ಶಾಲೆಗಳನ್ನು ತೆರೆಯುತ್ತಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿಪ್ರೋ ಮುಖ್ಯಸ್ಥರಾದ ಅಜೀಂ ಪ್ರೇಮ್ ಜಿ ದಂಪತಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅಹಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಮೆಹರೂಜ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net