ಬಿಗಿ ಭದ್ರತೆಯುಳ್ಳ ಜೈಲಿನಿಂದ ಎಸ್ಕೇಪ್​ ಆಗಿ ಬಾವಿಯಲ್ಲಿ ಅಡಗಿದ್ದ ರೇಪ್​ ಅಂಡ್​ ಮರ್ಡರ್​ ಆರೋಪಿ ಬಂಧನ! Kerala Prison

Untitled design (68)
Published on

Kerala Prison : ಕೇರಳದ ರಾಜ್ಯದ ಅತ್ಯಂತ ಭಯಾನಕ ಆರೋಪಿಗಳಲ್ಲಿ ಒಬ್ಬನಾದ ಗೋವಿಂದಚಾಮಿ ಎಂಬಾತ ಶುಕ್ರವಾರ (ಜುಲೈ 25) ಬೆಳಗಿನ ಜಾವ 1.15ರ ಸುಮಾರಿಗೆ ಬಿಗಿ ಭದ್ರತೆಯುಳ್ಳ ಕಣ್ಣೂರು ಜೈಲಿನಿಂದ ತಪ್ಪಿಸಿಕೊಂಡಿರುವ ಬಗ್ಗೆ ವರದಿಯಾದ ಬೆನ್ನಲ್ಲೇ ಇದೀಗ ಪೊಲೀಸರು ಕೈದಿಯನ್ನು ಬಂಧಿಸಿ ಜೈಲಿಗೆ ಕರೆ ತಂದಿದ್ದಾರೆ ಎಂದು ಎನ್​ಡಿಟಿವಿ ಮನೋರಮಾ ವರದಿ ಉಲ್ಲೇಖಿಸಿದೆ.

ಕಾಣೆಯಾದ ಅಪರಾಧಿಯನ್ನು ಕೆಲವೇ ಗಂಟೆಗಳಲ್ಲಿ ಕಣ್ಣೂರಿನಲ್ಲಿ ಪತ್ತೆ ಮಾಡಲಾಯಿತು. ಪೊಲೀಸರನ್ನು ಗಮನಿಸಿದ ಗೋವಿಂದಚಾಮಿ ಬಾವಿಯೊಳಗೆ ಅಡಗಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ, ಆತನ್ನು ಬಂಧಿಸಿ ಮತ್ತೆ ವಶಕ್ಕೆ ಪಡೆಯಲಾಯಿತು.

ಕೇರಳದ ಅತ್ಯಂತ ಸುಭದ್ರ ಜೈಲುಗಳಲ್ಲಿ ಒಂದಾಗಿದ್ದು, ಜೈಲಿನಲ್ಲಿ ಭದ್ರತಾ ಲೋಪಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅವನು ಹೇಗೆ ತಪ್ಪಿಸಿಕೊಳ್ಳಲು ಸಾಧ್ಯವಾಯಿತು ಎಂಬುದನ್ನು ಕಂಡುಹಿಡಿಯಲು ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

ಯಾರೀ ಗೋವಿಂದಚಾಮಿ?

2011ರ ಫೆಬ್ರವರಿ 1ರಂದು ಆರೋಪಿ ಗೋವಿಂದಚಾಮಿ, ಶೋರನೂರು ಮೂಲದ 23 ವರ್ಷದ ಸೌಮ್ಯಾಳನ್ನು ಎರ್ನಾಕುಲಂ-ಶೋರನೂರು ಪ್ಯಾಸೆಂಜರ್ ರೈಲಿನಲ್ಲಿ ಸುಲಿಗೆ ಮಾಡಿ, ಆಕೆಯನ್ನು ರೈಲಿನಿಂದ ತಳ್ಳಿ ಕೊಲೆ ಮಾಡಿದ್ದಾನೆ ಎಂಬ ಫಾಸ್ಟ್​ ಟ್ರ್ಯಾಕ್​ ನ್ಯಾಯಾಲಯದ ತೀರ್ಪನ್ನು ಕೇರಳ ಹೈಕೋರ್ಟ್ 2013ರ ಡಿಸೆಂಬರ್​ ತಿಂಗಳಲ್ಲಿ ಎತ್ತಿಹಿಡಿದಿತ್ತು. ಘಟನೆಯ ಸಂದರ್ಭದಲ್ಲಿ ಸೌಮ್ಯಳ ಮೇಲೆ ಅತ್ಯಾಚಾರ ಎಸಗಿ, ಕ್ರೂರವಾಗಿ ಹಲ್ಲೆ ಮಾಡಲಾಗಿತ್ತು. ಬಳಿಕ, ಸೌಮ್ಯಾಳನ್ನು ರೈಲ್ವೆ ಪೊಲೀಸರು ಹಳಿಯ ಬಳಿ ಪತ್ತೆ ಮಾಡಿದರು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾದೇ 2011, ಫೆಬ್ರವರಿ 6ರಂದು ತ್ರಿಶೂರ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೌಮ್ಯ ಮೃತಪಟ್ಟರು.

ಘಟನಾ ಸಮಯದಲ್ಲೇ ಆರೋಪಿ ಗೋವಿಂದಚಾಮಿ, ತಮ್ಮ ಹುಟ್ಟೂರಾದ ತಮಿಳುನಾಡಿನಲ್ಲಿ ಅಷ್ಟರಲ್ಲಾಗಲೇ ಎಂಟು ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದರು. 2012ರಲ್ಲಿ ತ್ವರಿತ ನ್ಯಾಯಾಲಯವು ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿತು. ಆರೋಪಿಯನ್ನು ರೂಢಿಗತ ಅಪರಾಧಿ ಪರಿಗಣಿಸಿ ಕಠಿಣ ಶಿಕ್ಷೆಯನ್ನು ನೀಡಿತು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net