ರಾಜ್ಯಪಾಲರು ಆರ್‌ಟಿಐ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ: ದಿನೇಶ್ ಗಂಡೂರಾವ್

dinesh-gundurao.webp
Published on

ಬೆಂಗಳೂರು: ರಾಜ್ಯದಲ್ಲಿ ರಾಜ್ಯಪಾಲರು ಮಾಹಿತಿ ಹಕ್ಕು ಕಾರ್ಯಕರ್ತರ ರೀತಿ ವರ್ತಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದರು.

ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯಪಾಲರ ನಡೆ ನೋಡಿದರೆ ಅವರೇ ವಿರೋಧ ಪಕ್ಷದ ನಾಯಕರ ರೀತಿ ಆಡುತ್ತಿದ್ದಾರೆ. ಆರ್‌ಟಿಐ ಕಾರ್ಯಕರ್ತರು ಅರ್ಜಿ ಹಾಕಿ ಮಾಹಿತಿ ಕೇಳುತ್ತಾರೆ. ಆ ರೀತಿ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯಪಾಲರು ತಮಗೆ ಬಂದ ಪ್ರತಿಯೊಂದು ಅರ್ಜಿಗೂ ಸರ್ಕಾರಕ್ಕೆ ಬರೆಯೋದಕ್ಕೆ ಶುರು ಮಾಡಿದ್ದಾರೆ. ಈ ರೀತಿ ರಾಜ್ಯಪಾಲರು ನಡೆದುಕೊಳ್ಳಬಾರದು. ಅದು ಅವರ ಸ್ಥಾನಕ್ಕೆ ಗೌರವ ತರುವುದಿಲ್ಲ. ಪ್ರಮುಖ ಕೇಸುಗಳ ಮೇಲೆ ಆದ್ಯತೆ ಕೊಡಬೇಕಾಗಿತ್ತು. ತನಿಖೆ ಮಾಡಿ ಪೊಲೀಸ್ ಅಧಿಕಾರಿಗಳ ಪ್ರಾಸಿಕ್ಯೂಶನ್ ಕೇಳಿದಾಗ ಅಂತಹದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಅದನ್ನು ಬಿಟ್ಟು ರಾಜ್ಯದಲ್ಲಿ ಏನೋ ನಡೆಯುತ್ತಿದೆ ಎನ್ನುವ ರೀತಿ ರಾಜ್ಯಪಾಲರು ಪತ್ರ ಬರೆಯುತ್ತಿರುವುದು ಖಂಡನೀಯ ಎಂದು ಹೇಳಿದರು.

ಕೇಂದ್ರ ಸರ್ಕಾರ ಈಗ ರಾಜ್ಯಪಾಲರನ್ನು ಉಪಯೋಗಿಸಿಕೊಂಡು ಇಲ್ಲಿ ರಾಜಕೀಯ ಮಾಡಲು ಶುರು ಮಾಡಿದ್ದಾರೆ. ಈ ರೀತಿ ರಾಜ್ಯಪಾಲರು ಪತ್ರ ಬರೆಯುತ್ತಾರಾ ಎಂದು ವಿರೋಧ ಪಕ್ಷದ ನಾಯಕರು ಮಾಹಿತಿ ಕೇಳಲಿ, ಆದರೆ ರಾಜ್ಯಪಾಲರು ಕೇಳುವುದು ಸರಿಯಲ್ಲ ಎಂದರು.

ರಾಜ್ಯಪಾಲರು ಯಾರು ಯಾರೋ ಕೊಟ್ಟ ಅರ್ಜಿ ಗಳ ಮಾಹಿತಿ ಕೇಳಿದ್ದಾರೆ. ಯಾವ ಕೇಸ್‌ಗೆ ಆದ್ಯತೆ ಕೊಡಬೇಕಿತ್ತು, ಅದಕ್ಕೆ ಕೊಟ್ಟಿಲ್ಲ. ಸ್ಪಷ್ಟ ಮಾಹಿತಿ ಇದ್ದು, ಪೊಲೀಸ್ ತನಿಖೆಗೆ ಅವಕಾಶ ಕೊಟ್ಟಿಲ್ಲ ಗಾಳಿಯಲ್ಲಿ ಬಂದ ಸುದ್ದಿಗಳನ್ನು ತೆಗೆದುಕೊಂಡಿದ್ದಾರೆ.ರಾಜ್ಯಪಾಲರ ನಡೆ ಖಂಡನೀಯ ಎಂದು ಹೇಳಿದರು.

ಗಂಗೇನಹಳ್ಳಿ ಕೇಸ್, ಲೋಕಾಯುಕ್ತ ಸಮನ್ಸ್ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಲೋಕಾಯುಕ್ತ ಪ್ರಕರಣ ಕೈಗೆತ್ತಿಕೊಂಡಿದ್ದು ಒಳ್ಳೆಯದ್ದಾಗಿದೆ. ಇದರಲ್ಲಿ ಸ್ಪಷ್ಟವಾದಂತಹ ಮಾಹಿತಿಗಳು ಇವೆ. ಕುಮಾರಸ್ವಾಮಿ ಅವರು ಜೋರಾಗಿ ಮಾತನಾಡುತ್ತಾರೆ.  ಯಾರ ಹೆಸರಿಗೆ ಡಿನೋಟಿಫಿಕೇಷನ್ ಮಾಡಿದರು? ಯಾರಿಗೆ ಆ ಜಾಗ ಹೋಗಿದೆ? ಯಾರು ಅದರ ಜಿಪಿಎ ಹೋಲ್ಡರ್ ಆಗಿದ್ದರು? ಯಾರು ಅದನ್ನು ಪ್ರಾರಂಭ ಮಾಡಿಸಿದರು? ಅಂತಿಮವಾಗಿ ಯಾರು ಮಾಡಿಸಿಕೊಟ್ಟರು? ಯಡಿಯೂರಪ್ಪ, ಕುಮಾರಸ್ವಾಮಿ ಅವರೇ ಮಾಡಿದ್ದು ಎಂದು ನಾವು ದಾಖಲೆ ಆಧರಿಸಿ ಹೇಳುತ್ತೇವೆ. ಅದಕ್ಕೆ ಒಂದು ಉತ್ತರ ಕೊಟ್ಟಿಲ್ಲ, ಅವರ ಸಹಿ ಇದೆ. ಅವರು ನಾನು ಸಹಿ ಮಾಡಿಲ್ಲ ಎಂದು ಸಬೂಬು ಶುರು ಮಾಡಿದ್ದಾರೆ. ಅದನ್ನು ಲೋಕಾಯುಕ್ತ ತನಿಖೆ ಮಾಡುತ್ತಿದೆ. ಕುಮಾರಸ್ವಾಮಿ ಬಾಮೈದನಿಗೆ ಡಿನೋಟಿಫಿಕೇಷನ್‌ನಿಂದ ಅನುಕೂಲ ಆಗಿಲ್ಲ ಎಂದು ಹೇಳಲಿ, ಕುಮಾರಸ್ವಾಮಿ ಅವರ ಅತ್ತೆಗೆ ಜಿಪಿಎ ಆಗಿಲ್ಲ ಎಂದು ಹೇಳಲಿ. ಯಡಿಯೂರಪ್ಪ ಅವರು ಆಗದೇ ಇರುವ ಡಿನೋಟಿಫಿಕೇಷನ್ ಮಾಡಿದ್ದು ಸುಳ್ಳಾ? ಅದರ ಬಗ್ಗೆ ಹೇಳಲಿ ಎಂದು ಸವಾಲು ಹಾಕಿದರು.

ಸತ್ಯ ಅವರ ಮುಂದೆ ಇದೆ. ಸರ್ಕಾರದ ನೂರು ಕೋಟಿ ಆಸ್ತಿ ಲೂಟಿ ಮಾಡಿದ್ದಾರೆ. ಯಡಿಯೂರಪ್ಪ, ಕುಮಾರಸ್ವಾಮಿ ಲೂಟಿಯಲ್ಲಿ ಭಾಗಿದಾರರು. ತನಿಖೆಯಲ್ಲಿ ಈ ಸತ್ಯಾಂಶ ಹೊರಗೆ ಬರಲಿ ಎನ್ನುವುದು ನಮ್ಮ ಉದ್ದೇಶ. ಲೋಕಾಯುಕ್ತರು ಯಡಿಯೂರಪ್ಪ ಅವರನ್ನು ಕರೆಸಿ ವಿಚಾರಣೆ ಮಾಡಿದ್ದಾರೆ. ಬಹುಶಃ ಕುಮಾರಸ್ವಾಮಿ ಅವರನ್ನೂ ಕರೆಸಬೇಕಾಗುತ್ತದೆ. ತನಿಖೆಯ ವರದಿ ಬರಲಿ, ಕಾನೂನು ಪ್ರಕಾರ ಕ್ರಮ ಆಗಲಿ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಮುನಿರತ್ನ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಆಗಲಿ. ಇದೊಂದು ಬಹಳ ವಿಚಿತ್ರ ಪ್ರಕರಣ. ನಮಗೆ ಯೋಚನೆ ಮಾಡಲು ಆಗುವುದಿಲ್ಲ. ಈ ರೀತಿಯಲ್ಲಿ ಮಾಡಲು ಸಾಧ್ಯವಾ? ದಿಗ್ಭ್ರಮೆ ಮೂಡಿಸುವಂತಹ ಘಟನೆಗಳು ಆಗಿವೆ. ಈ ಪ್ರಕರಣದ ಸ್ಪಷ್ಟವಾದ ತನಿಖೆ ಆಗಬೇಕು.

-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net