ಬಡವರಿಗೆ ಗೌರವಯುತ ಜೀವನ ಸರ್ಕಾರದ ಗುರಿ

hakkupatra
ಸೊರಬದಲ್ಲಿ ಸಚಿವ ಮಧು ಬಂಗಾರಪ್ಪ ಫಲಾನುಭವಿಗಳಿಗೆ 94ಸಿ ಯೋಜನೆಯಡಿ ಹಕ್ಕುಪತ್ರ ವಿತರಿಸಿದರು. ವೀರೇಶಕುಮಾರ್, ಮಂಜುಳಾ ಹೆಗಡಾಳ್, ಶಶಿಧರ್, ಚಂದನ್, ಶ್ರೀರಂಜನಿ ಇತರರಿದ್ದರು.
Published on

ಸೊರಬ: ಬಡವರನ್ನು ಭೂ ಒಡೆಯರನ್ನಾಗಿಸುವ ಮಹತ್ವಾಕಾಂಕ್ಷೆ ಯೋಜನೆ 94ಸಿ ಅಡಿಯಲ್ಲಿ ಹಕ್ಕುಪತ್ರ ನೀಡುವ ಯೋಜನೆ ಹಿಂದೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಶ್ರಮವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಪಟ್ಟಣದ ರಂಗ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 94ಸಿ ಹಕ್ಕುಪತ್ರ, ಕಂದಾಯ ಇಲಾಖಾ ನೌಕರರಿಗೆ ಬಹುಮಾನ ವಿತರಣೆ ಹಾಗೂ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಜೀವನದಲ್ಲಿ ಬಡವರಿಗೆ ಯೋಜನೆ ರೂಪಿಸಲು ಹೊಂದಿದ್ದ ಕಾಗೋಡು ತಿಮ್ಮಪ್ಪ ಅವರ ಕಾಳಜಿಯನ್ನು ಮೆಚ್ಚಲೇಬೇಕು ಎಂದರು.

ಬಡವರು ಕೂಡ ಯೋಗ್ಯ ಜೀವನ ಸಾಗಿಸುವಂತೆ ಮಾಡಲು ಸರ್ಕಾರ ಆದ್ಯತೆ ನೀಡಿದೆ. ಸಮಾಜದಲ್ಲಿ ಗೌರವಯುತ ಬದುಕು ಅವರದಾಗಬೇಕು ಎನ್ನುವ ಕಾರಣಕ್ಕೆ 94ಸಿ ಅಡಿ ಹಕ್ಕುಪತ್ರ ಪಡೆಯಲು ಇದ್ದ ಕಾನೂನು ತೊಡಕುಗಳನ್ನು ನಿವಾರಿಸಲು ಕಾಗೋಡು ಅವರು ಕಂದಾಯ ಸಚಿವರಾಗಿದ್ದ ಸಂದರ್ಭ ವಿಶೇಷ ಆಸಕ್ತಿವಹಿಸಿದ್ದರಿಂದ ಇಂದು ಮಸೂದೆ ಪಾಸಾಗಿದೆ. ಬಡವರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದರು.

ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿದ ಸವಿನೆನಪಿಗಾಗಿ ಬಳ್ಳಾರಿಯಲ್ಲಿ ಮೇ 20ರಂದು ತಾಂಡಾಗಳಲ್ಲಿ ವಾಸವಾಗಿರುವ ಪರಿಶಿಷ್ಟ ವರ್ಗದ ಸಮುದಾಯಕ್ಕೆ ಭೂ ಹಕ್ಕು ನೀಡುವ ನಿಟ್ಟಿನಲ್ಲಿ 1,11,164 ಜನರಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ. ಜನರು ಮತದಾನ ಮಾಡಿದ್ದು ಸಾರ್ಥಕವಾಗುವ ರೀತಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂಬ ತೃಪ್ತಿ ಇದೆ ಎಂದು ತಿಳಿಸಿದರು.

ಸಾಗರ ಎಸಿ ವೀರೇಶಕುಮಾರ್, ತಹಸೀಲ್ದಾರ್ ಮಂಜುಳಾ ಹೆಗಡಾಳ್, ಇಒ ಶಶಿಧರ್, ಪುರಸಭೆ ಮುಖ್ಯಾಧಿಕಾರಿ ಚಂದನ್, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್, ಪುರಸಭೆ ಅಧ್ಯಕ್ಷ ಪ್ರಭು ಮೇಸ್ತ್ರಿ, ಉಪಾಧ್ಯಕ್ಷೆ ಶ್ರೀರಂಜನಿ ಪ್ರವೀಣಕುಮಾರ್, ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಚಾರ್ಯೆ ಡಾ. ನೇತ್ರಾವತಿ, ತಬಲಿ ಬಂಗಾರಪ್ಪ, ಅಣ್ಣಪ್ಪ, ಗಣಪತಿ ಹುಲ್ತಿಕೊಪ್ಪ, ಅಂಜಲಿ, ಕಲ್ಲಂಬಿ ಹಿರಿಯಣ್ಣ, ಕೆ.ಪಿ.ರುದ್ರಗೌಡ, ಸದಾನಂದ ಗೌಡ, ಸಿಡಿಪಿಒ ಮಂಜಪ್ಪ, ಬಿಇಒ ಪುಷ್ಪಾ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net