ಶೈಕ್ಷಣಿಕ ಸಮಸ್ಯೆ ಪರಿಹಾರಕ್ಕೆ ಸರ್ಕಾರ ವಿಫಲ: ಎಬಿವಿಪಿ ಪ್ರತಿಭಟನೆ

abvp
ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಕಚೇರಿ ಎದುರು ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಎಚ್.ಕೆ.ಪ್ರವೀಣ್, ಮೋಹಿತ್, ಅಭಿಷೇಕ್, ಸಿಂಚನಾ, ಅವಿನಾಶ್, ಪ್ರಣೀತ್, ಯಶಸ್ವಿನಿ ಇತರರಿದ್ದರು.
Published on

ಶಿವಮೊಗ್ಗ: ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿದೆ. ಇದುವರೆಗೂ ವಿದ್ಯಾರ್ಥಿ ವೇತನ ನೀಡಿಲ್ಲ. ಹಾಸ್ಟೆಲ್‌ಗಳಲ್ಲಿ ಪ್ರವೇಶಾತಿ ಪ್ರಕ್ರಿಯೆ ನಡೆಸಿಲ್ಲ. ಶಿಕ್ಷಣ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಜಿಲ್ಲಾ ಉಸ್ತುವಾರಿ ಸಚಿವ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಶಾಲಾ ಕಾಲೇಜುಗಳು ಆರಂಭವಾಗಿ ತಿಂಗಳುಗಳೇ ಕಳೆದಿವೆ. ಬಸ್ ಪಾಸ್‌ಗೆಂದು ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ವಾರಗಟ್ಟಲೆ ಕಾಯಬೇಕಿದೆ. ಪಾಸ್ ದೊರೆಯದ ಕಾರಣ ವಿದ್ಯಾರ್ಥಿಗಳ ಪಾಲಕರ ಜೇಬಿಗೆ ಕತ್ತರಿ ಬಿದ್ದಿದೆ. ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ತ್ವರಿತವಾಗಿ ಪಾಸ್ ವಿತರಿಸಬೇಕು. ಶಕ್ತಿ ಯೋಜನೆ ಜಾರಿಯಾದ ಬಳಿಕ ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ನಿಲ್ಲಲ್ಲೂ ಜಾಗ ಇಲ್ಲದಂತಾಗಿದೆ. ಹೀಗಾಗಿ ಪ್ರಮುಖ ಮಾರ್ಗ, ಗ್ರಾಮೀಣ ಭಾಗದಲ್ಲಿ ಹೆಚ್ಚುವರಿ ಬಸ್‌ಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶಾಲೆಗಳು ಆರಂಭವಾಗಿ ಮೂರು ತಿಂಗಳು ಕಳೆದಿದ್ದರೂ ಹಾಸ್ಟೆಲ್‌ಗಳಲ್ಲಿ ಅವಕಾಶ ನೀಡದ ಕಾರಣ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಅವರಿಗೆ ವಸತಿ ಸಮಸ್ಯೆಯಾಗಿದೆ ಎಂಬುದು ಸರ್ಕಾರದ ಗಮನಕ್ಕೆ ಬಾರದಿರುವುದು ದುರದೃಷ್ಟಕರ. ಕಳೆದ ವರ್ಷ 80 ಸಾವಿರ ವಿದ್ಯಾರ್ಥಿಗಳು ವಸತಿ ನಿಲಯದ ಸೌಕರ್ಯವಿಲ್ಲದೆ ಅತಂತ್ರರಾಗಿದ್ದರು. ಕೂಡಲೇ ಹಾಸ್ಟೆಲ್ ಪ್ರವೇಶ ಪ್ರಕ್ರಿಯೆ ನಡೆಸಿ ಎಲ್ಲ ವಿದ್ಯಾರ್ಥಿಗಳಿಗೂ ವಸತಿ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ನೀಡುವ ವಿದ್ಯಾರ್ಥಿ ವೇತನವನ್ನೂ ಸರ್ಕಾರ ಬಿಡುಗಡೆ ಮಾಡಿಲ್ಲ. ಇದರಿಂದ ಅನೇಕ ವಿದ್ಯಾರ್ಥಿಗಳು ಶಿಕ್ಷಣದಿಂದಲೇ ದೂರವುಳಿಯುವ ಅಪಾಯವಿದೆ. ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ರೈತ ವಿದ್ಯಾನಿಧಿಯನ್ನೂ ಸ್ಥಗಿತಗೊಳಿಸುವ ಮೂಲಕ ಸರ್ಕಾರ ಶಿಕ್ಷಣ ಕ್ಷೇತ್ರದ ಮೇಲೆ ಪ್ರಹಾರ ನಡೆಸಿದೆ ಎಂದು ಆರೋಪಿಸಿದರು.
ಎಬಿವಿಪಿ ದಕ್ಷಿಣ ಪ್ರಾಂತ ಕಾರ್ಯದರ್ಶಿ ಎಚ್.ಕೆ.ಪ್ರವೀಣ್, ಕಾರ್ಯಕರ್ತರಾದ ಮೋಹಿತ್, ರೋಹಿತ್, ಪ್ರಣೀತ್, ಅಭಿಷೇಕ್, ರವಿ, ಸಿಂಚನಾ, ತೇಜಸ್, ಅಕ್ಷಯ್, ಯಶಸ್ವಿನಿ, ಅವಿನಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net