ಸಾಮಾಜಿಕ ಜಾಲತಾಣದಲ್ಲಿ ಎಚ್ಚರವಹಿಸಿ

D.25-MDG-1P1 cyber
ಮೂಡಿಗೆರೆ ಬಾಲಕರ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆದ ಸೈಬರ್ ಅಪರಾಧ ತಡೆಗಟ್ಟುವಿಕೆ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಸೈಯದ್ ರೆಹಮಾನ್ ಅವರನ್ನು ಸನ್ಮಾನಿಸಲಾಯಿತು. ನರೇಂದ್ರ ಶೆಟ್ಟಿ, ಭಾಗೀರಥಿ, ಸಾವಿತ್ರಮ್ಮ, ಬಾಲರಾಜ್, ವರುಣ್ ಇತರರಿದ್ದರು.
Published on

ಮೂಡಿಗೆರೆ: ಜಾಲತಾಣಗಳಲ್ಲಿ ಖಾಸಗಿ ವಿಚಾರ ಹಂಚಿಕೊಳ್ಳುವುದರಿಂದ ಅಪರಾಧ ಕೃತ್ಯ ಮಾಡುವವರಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಚಿಕ್ಕಮಗಳೂರಿನ ಶ್ರೀ ಶಾರದಾ ಸ್ಕೂಲ್ ಆಫ್ ಲಾ ಪ್ರಾಚಾರ್ಯ ಸಯ್ಯದ್ ರೆಹಮಾನ್ ಹೇಳಿದರು.
ಪಟ್ಟಣದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ರೋಟರಿ ಕ್ಲಬ್‌ನಿಂದ ಶನಿವಾರ ಏರ್ಪಡಿಸಿದ್ದ ಸೈಬರ್ ಅಪರಾಧ ತಡೆಗಟ್ಟುವಿಕೆ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ಸಾಮಾಜಿಕ ಜಾಲತಾಣದ ಸುಳಿಗೆ ಸಿಲುಕಿರುವ ಯುವಸಮೂಹ ಎಲ್ಲ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ತುರುಕುವ ಹವ್ಯಾಸ ಮೈಗೂಡಿಸಿಕೊಂಡಿದೆ. ಇದು ಅತ್ಯಂತ ಅಪಾಯಕಾರಿ. ಸಾಮಾಜಿಕ ಜಾಲತಾಣದ ಬಳಕೆ ಗೀಳಾಗಿ ಪರಿಣಮಿಸುವುದು ಒಂದೆಡೆಯಾದರೆ ಖಾಸಗಿ ವಿಷಯಗಳು ಅಪರಾಧ ಕೃತ್ಯ ನಡೆಸುವವರಿಗೆ ಸುಲಭವಾಗಿ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ತಿಳಿಸಿದರು.
ಮೂಡಿಗೆರೆ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀನಾಥ್ ರೆಡ್ಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳಲ್ಲಿ ಹಣ ವಂಚನೆ ಹೆಚ್ಚಾಗುತ್ತಿದೆ. ಬ್ಯಾಂಕಿಂಗ್, ಮೊಬೈಲ್, ಸಾಮಾಜಿಕ ಜಾಲತಾಣಗಳನ್ನು ಬಳಸುವವರು ಯಾರಿಗೂ ಸುಲಭವಾಗಿ ತಿಳಿಯದ ಪಾಸ್‌ವರ್ಡ್‌ಗಳನ್ನು ಬಳಸಿ ಖಾತೆ ನಿರ್ವಹಿಸಬೇಕು. ಯಾವ ಕಾರಣಕ್ಕೂ ಪಾಸ್‌ವರ್ಡ್, ಒಟಿಪಿಗಳನ್ನು ಇತರರೊಂದಿಗೆ ಹಂಚಿಕೊಳ್ಳಬಾರದು. ಬ್ಯಾಂಕ್ ವಿವರಕ್ಕೆ ನಕಲಿ ವ್ಯಕ್ತಿಗಳು ಕರೆ ಮಾಡಿ ಒಟಿಪಿ ಕೇಳಿದರೆ ಪ್ರತಿಕ್ರಿಯಿಸಬಾರದು. ಆನ್‌ಲೈನ್ ವಂಚನೆಗಳು ನಡೆದರೆ ಪೊಲೀಸ್ ಸಹಾಯವಾಣಿ, ಹತ್ತಿರದ ಪೊಲೀಸ್ ಠಾಣೆ ಅಥವಾ ಸಿಇಎನ್ ಠಾಣೆಗಳಿಗೆ ಮಾಹಿತಿ ನೀಡಿ ದೂರು ದಾಖಲಿಸಬೇಕು ಎಂದು ತಿಳಿಸಿದರು. ರೋಟರಿ ಅಧ್ಯಕ್ಷ ನರೇಂದ್ರ ಶೆಟ್ಟಿ, ಕಾಲೇಜಿನ ಪ್ರಾಚಾರ್ಯೆ ಭಾಗೀರಥಿ, ಪ್ರಾಧ್ಯಾಪಕಿ ಸಾವಿತ್ರಮ್ಮ, ರೋಟರಿ ಪದಾಧಿಕಾರಿ ಬಾಲರಾಜ್, ವರುಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net