ಗೃಹಲಕ್ಷ್ಮಿ ಎಫೆಕ್ಟ್ ಪಡಿತರ ಚೀಟಿ ವಿಭಜನೆ ಗಿಮಿಕ್; ಫಲಾನುಭವಿಗಳ ಬುದ್ಧಿವಂತಿಕೆಗೆ ಸರ್ಕಾರ ಬ್ರೇಕ್?

gruhalakshmi bpl
Published on

ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಗ್ಯಾರಂಟಿ ಯೋಜನೆ ಅನುಷ್ಠಾನದ ಬಳಿಕ ಸರ್ಕಾರ ಆರ್ಥಿಕ ಪರಿಸ್ಥಿತಿ ಕೈತಪ್ಪದಂತೆ ಎಚ್ಚರಿಕೆ ವಹಿಸಿ ಸಾಗುತ್ತಿದೆ. ಈ ನಡುವೆ ಮುಂಬರುವ ಸವಾಲುಗಳನ್ನು ಅಂದಾಜಿಸುವ ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳುವ ಕೆಲಸ ನಡೆದಿದೆ. ಆದರೆ, ಗ್ಯಾರಂಟಿ ಯೋಜನೆಗಳಲ್ಲಿ ‘ಹೆಚ್ಚಿನ ಪಾಲು’ ಪಡೆದುಕೊಳ್ಳಲು ಜನರು ಕೂಡ ನಾನಾ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇದರ ನಿಯಂತ್ರಣ ಸರ್ಕಾರಕ್ಕೂ ಸವಾ ಲಾಗಿದೆ. ಪ್ರಸ್ತುತ ಗೃಹಲಕ್ಷ್ಮಿ ಯೋಜನೆಗೆ ಪಡಿತರ ಚೀಟಿಯೇ ಆಧಾರ. ಪಡಿತರ ಚೀಟಿಯಲ್ಲಿನ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆಯ ಲಾಭ ಸಿಗುತ್ತಿದೆ. ಒಂದೇ ಕುಟುಂಬದ ಸದಸ್ಯರು ನಾವು ಬೇರೆ ಬೇರೆ ಎಂದು ‘ವಿಭಜಿತ’ರಾಗುತ್ತಿದ್ದಾರೆ. ಪ್ರತ್ಯೇಕ ಪಡಿತರ ಚೀಟಿ ಮಾಡಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಇದು ಸರ್ಕಾರದ ಗಮನಕ್ಕೂ ಬಂದಿದೆ. ಈ ಹಿನ್ನೆಲೆಯಲ್ಲಿಯೇ ಪಡಿತರ ಚೀಟಿಯನ್ನು ವಿಭಜಿಸುವ ಕಾರ್ಯ ನಡೆಯದಂತೆ ನೋಡಿಕೊಳ್ಳಲು ಹಣಕಾಸು ಇಲಾಖೆ ಆಹಾರ ಇಲಾಖೆಗೆ ನಿರ್ದೇಶನ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಅರ್ಹರಿಗೆ ಹೊಸ ಪಡಿತರ ಚೀಟಿ ಕೊಡುವುದು ಅನಿವಾರ್ಯವಾಗುತ್ತದೆ. ಆದರೆ, ಗೃಹಲಕ್ಷ್ಮೀ ಫಲಾನು ಭವಿಯಾಗಲು ಉದ್ದೇಶಪೂರ್ವಕವಾಗಿಯೋ ಅಥವಾ ಕೌಟುಂಬಿಕ ಕಾರಣಕ್ಕೆ ಪಡಿತರ ಚೀಟಿಗೆ ಬೇಡಿಕೆ ಇಡುವ ಸಾಧ್ಯತೆಯನ್ನು ಸರ್ಕಾರ ಅಂದಾಜಿಸಿದೆ.

ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಚರ್ಚೆ ನಡೆಸಿದೆ. ಸರ್ಕಾರದ ಅಂಕಿ-ಅಂಶದ ಪ್ರಕಾರ 1.28 ಕೋಟಿ ಮಂದಿ ಈ ಯೋಜನೆ ಲಾಭ ಪಡೆದುಕೊಳ್ಳಬಹುದು. ಆಗಸ್ಟ್ 30ರಂದು ಯೋಜನೆಗೆ ಚಾಲನೆ ಸಿಕ್ಕಿದ್ದು, ಈವರೆಗೆ 1.12 ಕೋಟಿ ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿದ, ಪಡಿತರ ಚೀಟಿಯಲ್ಲಿ ಯಜಮಾನಿ ಎಂದು ಗುರುತಿಸಲ್ಪಟ್ಟವರಿಗೆ ಎರಡು ಸಾವಿರ ರೂ. ಮೊದಲ ಕಂತು ಜಮೆಯಾಗಿದ್ದು, ಎರಡನೇ ಕಂತು ಇಷ್ಟರಲ್ಲೇ ಜಮೆಯಾಗಲಿದೆ. ಈ ಆರ್ಥಿಕ ವರ್ಷದಲ್ಲಿ ಮುಂದಿನ ಎಂಟು ತಿಂಗಳಿಗೆ ಗೃಹಲಕ್ಷ್ಮಿಗೆಂದೇ 17,500 ಕೋಟಿ ರೂ. ಬೇಕಾಗಬಹುದೆಂದು ಅಂದಾಜಿಸಿದ್ದು, ಮುಂದಿನ ವರ್ಷ 32 ಸಾವಿರ ಕೋಟಿ ರೂ.ವರೆಗೂ ವೆಚ್ಚವಾಗಲಿದೆ.

ಆರ್ಥಿಕ ಸ್ಥಿತಿ ಸುಭದ್ರ

ಗ್ಯಾರಂಟಿ ಯೋಜನೆಗೆ ಹಣಕಾಸು ಹೊಂದಿಸುವುದು ಸವಾಲಿನ ಕೆಲಸ. ಆದರೆ ಈವರೆಗೂ ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಯೇ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಮತ್ತು ಕಳೆದ ವರ್ಷದ ಚಟುವಟಿಕೆಯನ್ನು ಗಮನಿಸಿದಾಗ ಯಾವ ಹಂತದಲ್ಲಿ ಪ್ರಗತಿ ಸಾಧಿಸಬೇಕಿತ್ತೋ ಅದೇ ಪ್ರಮಾಣದಲ್ಲಿದೆ. ಅಂದರೆ ಶೇ.35-40ರ ಆಜುಬಾಜಿನಲ್ಲಿದೆ. ಮುಂದಿನ ದಿನಗಳಲ್ಲೇ ವೇಗ ಪಡೆದುಕೊಳ್ಳಲಿದೆ ಎಂದೂ ವಿವರಿಸಿದ್ದಾರೆ.

ಹೊಸ ಅರ್ಜಿ ವಿಲೇವಾರಿ

ಹೊಸ ಬಿಪಿಎಲ್ ಕಾರ್ಡ್​ಗಾಗಿ 2023ರ ಮಾರ್ಚ್​ವರೆಗೆ ಸಲ್ಲಿಕೆಯಾಗಿರುವ 2.95 ಲಕ್ಷ ಅರ್ಜಿಗಳ ವಿಲೇವಾರಿಗೆ ಸರ್ಕಾರದ ಮುಂದಾಗಿದೆ. ಇದಕ್ಕಾಗಿ ಸೆ.29ರಂದು ಆದೇಶವನ್ನೂ ಹೊರಡಿಸಿದೆ.

ನೋಂದಣಿ ನಿರಂತರ

ಜನರ ಕೈಗೆ ನೇರವಾಗಿ ಹಣ ನೀಡುವ ಇಂತಹ ಯೋಜನೆಯನ್ನು ನಿಲ್ಲಿಸಲಾಗದು. ಷರತ್ತು ವಿಧಿಸಿ ಕಡಿತ ಮಾಡಲೂ ಸಹ ಬರುವುದಿಲ್ಲ. ತಮಗೆ ಕೊಟ್ಟದ್ದನ್ನು ವಾಪಸ್ ಬಿಟ್ಟುಕೊಡಲು ಜನರೂ ಸಿದ್ಧರಿರುವುದಿಲ್ಲ. ಹೀಗಾಗಿ ಸರ್ಕಾರ ತೆರಿಗೆ ಪ್ರಮಾಣ ಹೆಚ್ಚಿಸಿಕೊಳ್ಳುವುದೇ ಮಾರ್ಗ ಎಂದು ಹಣಕಾಸು ಇಲಾಖೆ ಅಭಿಪ್ರಾಯ. ಇದೇ ವಿಚಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಪ್ರತಿಕ್ರಿಯೆ ನೀಡಿದ್ದು, ಯೋಜನೆಯ ನೋಂದಣಿ ಪ್ರಕ್ರಿಯೆ ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ಹರಡಿದವರಿಗೆ ನೋಟಿಸ್ ಜಾರಿ ಮಾಡುತ್ತೇವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net