ಪತ್ರಕರ್ತರಿಗೆ ಸರ್ಕಾರದಿಂದ ನಿವೇಶನ: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

Madhyama academy DKS
Published on

ಬೆಂಗಳೂರು: ಪತ್ರಕರ್ತರು ಗೌರವದಿಂದ ಬದುಕಲು ಮತ್ತು ತಮ್ಮದೇ ಗೂಡುಕಟ್ಟಿಕೊಟ್ಟಲು ಅನುಕೂಲವಾಗುವಂತೆ ಸರ್ಕಾರದಿಂದ ಅಥವಾ ಖಾಸಗಿ ಲೇಔಟ್‌ಗಳಲ್ಲಿ ಎಲ್ಲಾದರೂ ಸರಿ ಒಂದು ನಿವೇಶನ ಕಲ್ಪಿಸಲು ಸರ್ಕಾರವು ಮುಂದಿನ ದಿನಗಳಲ್ಲಿ ೋಷಣೆ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ಐಐಎಸ್ಸಿಯ ಟಾಟಾ ಸಭಾಂಗಣದಲ್ಲಿ ಸೋಮವಾರ ನಡೆದ 2023 ಮತ್ತು 2024ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ವತಿಯಿಂದ ಈಗಾಲಗೇ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಹಾಗೂ ಪತ್ರಕರ್ತರಿಗೆ ಆರೋಗ್ಯ ವಿಮೆ ನೀಡಲು ಯೋಜನೆ ರೂಪಿಸಲಾಗಿದೆ. ಹಾಗೆಯೇ ಗ್ರಾಮೀಣ ಮತ್ತು ನಗರ ಭಾಗದ ಪತ್ರಕರ್ತರಿಗೆ ನಿವೇಶನ ನೀಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿರುವ ಪತ್ರಿಕಾ ಸ್ವಾತಂತ್ರ್ಯ ಬೇರೆಲ್ಲೂ ಇಲ್ಲ:

ಮಾಧ್ಯಮಗಳಿಗೆ ಕರ್ನಾಟಕದಲ್ಲಿ ಇರುವಷ್ಟು ಸ್ವಾತಂತ್ರ್ಯ ದೇಶದ ಬೇರೆ ಯಾವುದೇ ರಾಜ್ಯಗಳಲ್ಲಿ ಇಲ್ಲ. ದಿನಬೆಳಗಾದರೆ ನೀವು ನಮಗೆ ಹೊಡೆಯುತ್ತಲೇ ಇರುತ್ತೀರಿ, ಟೀಕಿಸಿ ನಮ್ಮನ್ನು ಹಳ್ಳಕ್ಕೆ ಹಾಕುತ್ತಲೇ ಇರುತ್ತೀರಿ, ನಿಮಗೆ ಸಂತೋಷವಾದರೆ ನಮ್ಮನ್ನು ಮೇಲಕ್ಕೆ ಏರಿಸುತ್ತೀರಿ. ನಿಮ್ಮನ್ನು ಬಿಟ್ಟು ನಾವು ಬದುಕಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮ ನಾಲ್ಕನೇ ಅಂಗ. ಸರ್ಕಾರ, ಅಧಿಕಾರಿಗಳು, ನ್ಯಾಯಾಲಯ ತಪ್ಪು ಮಾಡಿದರೆ ತಿದ್ದುವ ಕೆಲಸವನ್ನು ಮಾಧ್ಯಮ ಮಾಡಲಿದೆ. ಸರ್ಕಾರ ಬದಲಿಸುವ, ನಾಯಕರನ್ನು ಬೆಳೆಸುವ ಶಕ್ತಿ ಮಾಧ್ಯಮಗಳಿಗಿದೆ. ಆದರೆ, ಸುಳ್ಳು ಸುದ್ದಿಗಳನ್ನು ಯಾವ ರೀತಿ ನಿಯಂತ್ರಿಸುತ್ತೀರಿ ಎಂಬುದನ್ನು ನೀವೇ ಯೋಚಿಸುವಂತೆ ತಿಳಿಸಿದರು.

ಪ್ರಶಸ್ತಿಗಳಿಗೆ ಮರುಜೀವ

ಈ ಹಿಂದಿನ ಸರ್ಕಾರ ಪ್ರತಿಷ್ಠಿತ ಟಿಎಸ್‌ಆರ್ ಪ್ರಶಸ್ತಿ, ಮೊಹರೆ ಹನುಮಂತರಾಯ ಪ್ರಶಸ್ತಿ, ಪರಿಸರ ಪತ್ರಿಕಾ ಪರಿಷತ್ ನೀಡುವ ಪ್ರಶಸ್ತಿಯನ್ನು ಅನೇಕ ವರ್ಷಗಳಿಂದ ನೀಡಿರಲಿಲ್ಲ. ಆ ಎಲ್ಲ ಪ್ರಶಸ್ತಿಗಳನ್ನು ನಮ್ಮ ಸರ್ಕಾರ ನೀಡುತ್ತಿದೆ. ಜತೆಗೆ ರಘುರಾಮ್ ಶೆಟ್ಟಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಕುರಿತು ಚರ್ಚೆ ನಡೆಯುತ್ತಿದೆ. ಬೆಲೆ ಏರಿಕೆ ಹಿನ್ನೆಲೆಯಲ್ಲಿ ಪ್ರಶಸ್ತಿ ಮೊತ್ತವನ್ನು ಕೂಡ ಹೆಚ್ಚಳ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದರು.

ಮುದ್ರಣ, ವಿದ್ಯುನ್ಮಾನಕ್ಕೆ ಸಾಮಾಜಿಕ ತಾಣ ಸವಾಲು:

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮಾತನಾಡಿ, ಜನರ, ಸಮಾಜದ ಪ್ರಾಣವಾಯು ಆಗಿರುವ ಪತ್ರಿಕಾ ವೃತ್ತಿಯ ಉಸಿರನ್ನು ಕಾಪಾಡಲು ನಮ್ಮ ಸಂವಿಧಾನ ಇದೆ. ನಮ್ಮ ಸಂವಿಧಾನ ಕತೃ ಆದ ಅಂಬೇಡ್ಕರ್ ಅವರೇ ಹೇಳಿರುವ ರೀತಿ ಪತ್ರಿಕಾ ವೃತ್ತಿ ನಿಜವಾದ ಪ್ರಾಣವಾಯು ಆಗಿ ಉಳಿಯಬೇಕು. ಈ ದಿಕ್ಕಿನಲ್ಲಿ ನಮ್ಮ ಮಾಧ್ಯಮ ಅಕಾಡೆಮಿ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ತಿಳಿಸಿದರು.

ಅಚ್ಚುಮೊಳೆ ಅವಧಿಯಿಂದ ಕೃತಕ ಬುದ್ದಿಮತ್ತೆವರೆಗೂ ಪತ್ರಿಕಾ ವೃತ್ತಿ ಬೆಳೆದಿದೆ. ತಂತ್ರಜ್ಞಾನದಲ್ಲಿ ನಮ್ಮ ವೃತ್ತಿ ಎಷ್ಟೇ ಮುಂದುವರೆದಿದ್ದರೂ ಸತ್ಯ ಮತ್ತು ನಿಷ್ಠುರ ಮೌಲ್ಯಗಳು ಮಾತ್ರ ಬದಲಾಗಬಾರದು. ಆದರೆ ಇಂದು ಊಹಾ ಪತ್ರಿಕೋದ್ಯಮ, ಕಾಲ್ಪನಿಕ ಪತ್ರಿಕೋದ್ಯಮ ಮತ್ತು ಸುಳ್ಳು ಸುದ್ದಿಗಳ ಹಾವಳಿ ಇಂದು ಹೆಚ್ಚಾಗಿದೆ. ಹಾಗೆಯೇ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ ಸಾಮಾಜಿಕ ತಾಣವು ಸವಾಲಾಗಿದೆ. ಆಧುನಿಕ ಕಾಲಕ್ಕೆ ತಕ್ಕಂತೆ ಯುವ ಪೀಳಿಗೆಯ ಪತ್ರಕರ್ತರನ್ನು ಅಣಿಗೊಳಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾರ್ಯದರ್ಶಿ ಬಿ.ಬಿ. ಕಾವೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್, ಅಕಾಡೆಮಿ ಕಾರ್ಯದರ್ಶಿ ಸಹನಾ ಎಂ. ಮತ್ತು ಸದಸ್ಯ ಶಿವಾನಂದ ತಗಡೂರು ಸೇರಿ ಹಲವರು ಉಪಸ್ಥಿತರಿದ್ದರು.

ಸುಳ್ಳು ಸುದ್ದಿಗಳು ಮತ್ತು ತಪ್ಪು ಮಾಹಿತಿಗಳನ್ನು ಭಿತ್ತರಿಸುವವರ ವಿರುದ್ಧ ನಾವು ಹೋರಾಟ ಮಾಡಬೇಕಿದೆ. ಇದು ಕೇವಲ ಸುದ್ದಿಮನೆಗಳ ದೃಷ್ಟಿಯಿಂದ ಮಾತ್ರವಲ್ಲದೆ, ಓದುಗರ ದೃಷ್ಟಿಯಿಂದಲೂ ಕಾರ್ಯನಿರ್ವಹಿಸಬೇಕಿದೆ. - ಆಯೇಷಾ ಖಾನಂ, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net