ಸರ್ಕಾರದಿಂದ ಶ್ರಮಿಕ ನಿವಾಸ ಕಲ್ಪಿಸುವ ಕಂಪನಿಗಳಿಗೆ ಸಬ್ಸಿಡಿ - (Shramika Nivas – Live Near Work)

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯು ಈ ಯೋಜನೆ ರೂಪಿಸಿದೆ. ಕಾರ್ಮಿಕರ ದೈನಂದಿನ ಪ್ರಯಾಣದ ಹೊರೆ ಕಡಿಮೆ ಮಾಡುವುದು, ವಸತಿ ಸೌಲಭ್ಯ ಸುಧಾರಿಸುವುದು, ಉದ್ಯೋಗಿಗಳ ಉಳಿಕೆ ಪ್ರಮಾಣ ಹೆಚ್ಚಿಸುವುದು ಹಾಗೂ ಕೈಗಾರಿಕಾ ವಲಯಗಳನ್ನು ಹೂಡಿಕೆಗೆ ಹೆಚ್ಚು ಆಕರ್ಷಕವಾಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಗುಣಮಟ್ಟದ ವಸತಿ ನಿರ್ಮಿಸಿದರೆ ಕಂಪನಿಗಳಿಗೆ ಸಬ್ಸಿಡಿ
ಕಾರ್ಮಿಕರಿಗೆ ಶ್ರಮಿಕ ನಿವಾಸ ಯೋಜನೆ
Published on: 

ಬೆಂಗಳೂರು: (Shramika Nivas – Live Near Work) ಕಾರ್ಮಿಕರ ವಸತಿ ಸೌಲಭ್ಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಶ್ರಮಿಕ ನಿವಾಸ ಕೆಲಸದ ಸ್ಥಳದ ಸಮೀಪ ವಾಸ’ ಯೋಜನೆ ಜಾರಿಗೆ ತಂದಿದೆ. ಕಂಪನಿಗಳು ಕಾರ್ಮಿಕರಿಗೆ ಗುಣಮಟ್ಟದ ವಸತಿ ನಿರ್ಮಿಸಿದರೆ ಯೋಜನೆಯಡಿ ಸರ್ಕಾರದಿಂದ ಸಹಾಯಧನ ಸಿಗಲಿದೆ.

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯು ಈ ಯೋಜನೆ ರೂಪಿಸಿದೆ. ಕಾರ್ಮಿಕರ ದೈನಂದಿನ ಪ್ರಯಾಣದ ಹೊರೆ ಕಡಿಮೆ ಮಾಡುವುದು, ವಸತಿ ಸೌಲಭ್ಯ ಸುಧಾರಿಸುವುದು, ಉದ್ಯೋಗಿಗಳ ಉಳಿಕೆ ಪ್ರಮಾಣ ಹೆಚ್ಚಿಸುವುದು ಹಾಗೂ ಕೈಗಾರಿಕಾ ವಲಯಗಳನ್ನು ಹೂಡಿಕೆಗೆ ಹೆಚ್ಚು ಆಕರ್ಷಕವಾಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಪ್ರತಿ 100 ಕಾರ್ಮಿಕರಿಗೆ ವಸತಿ ನಿರ್ಮಿಸಿದರೆ 1 ಕೋಟಿ ರೂ., ಸಾವಿರ ಕಾರ್ಮಿಕರಿಗೆ 10 ಕೋಟಿ ಹಾಗೂ 2,500 ಕಾರ್ಮಿಕರಿಗೆ 25 ಕೋಟಿ ರೂ. ಸಹಾಯಧನ ದೊರೆಯಲಿದೆ. ಪ್ರತಿ ಕಂಪನಿಗೆ ಗರಿಷ್ಠ 25 ಕೋಟಿ ರೂ.ಸಹಾಯಧನ ನಿಗದಿಪಡಿಸಲಾಗಿದೆ. ಯೋಜನೆಯಡಿ ಒಟ್ಟು 30 ಸಾವಿರ ಕಾರ್ಮಿಕರ ವಸತಿ ಘಟಕಗಳಿಗೆ ಬೆಂಬಲ ನೀಡುವ ಗುರಿ ಹೊಂದಲಾಗಿದೆ. ವಸತಿಯಲ್ಲಿ ಕಾರ್ಮಿಕರು ವಾಸಿಸಲು ಆರಂಭಿಸಿದ ದಿನದಿಂದ ಮೂರು ವರ್ಷಗಳ ಅವಧಿಯಲ್ಲಿ ಸಹಾಯಧನವನ್ನು ಮೂರು ಸಮಾನ ಕಂತುಗಳಲ್ಲಿ ಪಾವತಿಸಲಾಗುತ್ತದೆ. ವಸತಿ ಸೌಲಭ್ಯಕ್ಕೆ ಅನ್ವಯವಾಗುವಂತೆ ಕೈಗಾರಿಕಾ ದರದಲ್ಲಿ ವಿದ್ಯುತ್ ಮತ್ತು ನೀರು ಪೂರೈಕೆ ಸೌಲಭ್ಯವನ್ನೂ ಒದಗಿಸಲಾಗುತ್ತದೆ.

Also Read
ಮೊದಲ ಬ್ಯಾಟ್‌ನ ಮಾತೇ ಬೇರೆ...ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟು 37 ವರ್ಷ ಪೂರೈಸಿದ ನಿಮಿತ್ತ ಭಾವುಕ ಪೋಸ್ಟ್ ಹಂಚಿಕೊಂಡ ಸಚಿನ್! | Sachin Tendulkar
ಗುಣಮಟ್ಟದ ವಸತಿ ನಿರ್ಮಿಸಿದರೆ ಕಂಪನಿಗಳಿಗೆ ಸಬ್ಸಿಡಿ

ಯಾವ ಕಂಪನಿಗಳಿಗೆ ಅರ್ಹತೆ?

ಸಾಮಾನ್ಯ ಉತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿರುವ ಕೈಗಾರಿಕಾ ಉದ್ಯಮಗಳು ಅರ್ಹತೆ ಪಡೆಯಲಿವೆ. ಕಂಪನಿಯ ಸ್ವಂತ ಕಾರ್ಮಿಕರು ಅಥವಾ ಕೈಗಾರಿಕಾ ಕ್ಲಸ್ಟರ್‌ನ ಕಾರ್ಮಿಕರಿಗೆ ಉಚಿತವಾಗಿ ಅಥವಾ ನಿಗದಿತ ಕೈಗೆಟುಕುವ ಬಾಡಿಗೆಯಲ್ಲಿ ವಸತಿ ಒದಗಿಸಬೇಕು. ಕಂಪನಿಯ ವೇತನಪಟ್ಟಿಯಲ್ಲಿರುವ ಕಾಯಂ ಉದ್ಯೋಗಿಗಳನ್ನು ಮಾತ್ರ ಕಾರ್ಮಿಕರ ಸಂಖ್ಯೆಗೆ ಪರಿಗಣಿಸಲಾಗುತ್ತದೆ. ಅವರ ಅವಲಂಬಿತರನ್ನು ಹೆಚ್ಚುವರಿ ಕಾರ್ಮಿಕರೆಂದು ಪರಿಗಣಿಸುವುದಿಲ್ಲ. ವಸತಿ ನಿರ್ಮಾಣವು ಪ್ರಧಾನಮಂತ್ರಿ ಆವಾಸ್ ಯೋಜನೆಯ ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣಗಳ ಮಾನದಂಡಗಳಿಗೆ ಅನುಗುಣವಾಗಿರಬೇಕು. ಕಂಪನಿಗೆ ಹಂಚಿಕೆಯಾಗಿರುವ ಕೆಐಎಡಿಬಿ ಕೈಗಾರಿಕಾ ನಿವೇಶನದಲ್ಲಿ ವಸತಿ ನಿರ್ಮಿಸಬೇಕು. ಪ್ರತಿ ವರ್ಷ ಗರಿಷ್ಠ 10 ಸಾವಿರ ಕಾರ್ಮಿಕರಿಗೆ ಸಂಬಂಧಿಸಿದ ಹಕ್ಕುಪತ್ರಗಳನ್ನು ಪರಿಗಣಿಸಲಾಗುತ್ತದೆ. ಯೋಜನೆಯಡಿ 3 ಮಾದರಿಯ ವಸತಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕಾರ್ಮಿಕರ ಅಭ್ಯುದಯಕ್ಕಾಗಿ ಯೋಜನೆ ರೂಪಿಸಲಾಗಿದೆ. ವಸತಿ ಕಲ್ಪಿಸುವ ಕಾರ್ಮಿಕರ ಸಂಖ್ಯೆಗೆ ಅನುಗುಣವಾಗಿ ಸಹಾಯಧನ ಹೆಚ್ಚಳವಾಗಲಿದೆ. ಕಂಪನಿಗಳು ಯೋಜನೆ ಸದ್ಬಳಕೆ ಮಾಡಿಕೊಳ್ಳುವಂತಾಗಬೇಕು.

ಎಂ.ಬಿ.ಪಾಟೀಲ, ಸಚಿವ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ.