ಸಲಹಾ ಸಮಿತಿ ರಚಿಸಿರುವ ನಿರ್ಧಾರ ಮರು ಪರಿಶೀಲಿಸಿ

web 2
Published on

ಸಾಗರ: ಸಿಗಂದೂರು ಚೌಡೇಶ್ವರಿ ದೇವಾಲಯದ ಆಡಳಿತ ನಿರ್ವಹಣೆಗೆ ಮೇಲ್ವಿಚಾರಣಾ ಹಾಗೂ ಸಲಹಾ ಸಮಿತಿ ರಚಿಸಿರುವ ನಿರ್ಧಾರವನ್ನು ಮರು ಪರಿಶೀಲಿಸಬೇಕು ಎಂದು ಒತ್ತಾಯಿಸಿ ಹಿಂದುಳಿದ ವರ್ಗಗಳ ಒಕ್ಕೂಟದ ವಕೀಲರು ಬುಧವಾರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

ಸಿಗಂದೂರು ಚೌಡೇಶ್ವರಿ ದೇವಿ ಧರ್ಮದರ್ಶಿ ರಾಮಪ್ಪ ಅವರ ಮನೆತನದ ದೇವರು. ಹಿರೇಭಾಸ್ಕರ ಹಾಗೂ ಲಿಂಗನಮಕ್ಕಿ ಡ್ಯಾಂ ಹಿನ್ನೀರಿನಲ್ಲಿ ಮುಳುಗಡೆಯಾದ ನಂತರ ದೇವರ ಮೂರ್ತಿಯನ್ನು ಈಗಿರುವ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ರಾಮಪ್ಪ ಅವರ ಕುಟುಂಬದವರೇ ಪೂಜಾ ವಿಧಿವಿಧಾನ, ಹೋಮ ಹವನ ನಡೆಸಿಕೊಂಡು ಬರುತ್ತಿದ್ದಾರೆ. ಹೀಗಿರುವಾಗ ದೇವಸ್ಥಾನದ ವಿಷಯದಲ್ಲಿ ಸರ್ಕಾರ ಮಧ್ಯಪ್ರವೇಶಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಸಿಗಂದೂರು ಕ್ಷೇತ್ರದಲ್ಲಿ ಭಕ್ತರಿಗೆ ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಉಚಿತ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಕಡಿಮೆ ಶುಲ್ಕದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯಿಂದ ಸಾಂಸ್ಕೃತಿಕ, ಶೈಕ್ಷಣಿಕ, ಕ್ರೀಡೆ ಹಲವು ಕ್ಷೇತ್ರಗಳ ಸಾಧಕರಿಗೆ ನೆರವು ನೀಡಲಾಗುತ್ತಿದೆ. ಹೀಗಿರುವಾಗ ಮೇಲ್ವಿಚಾರಣಾ ಅಥವಾ ಸಲಹಾ ಸಮಿತಿ ರಚನೆಯ ಅಗತ್ಯ ಇರುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಈಚೆಗೆ ದೇವಸ್ಥಾನದ ಪೂಜಾವಿಧಿವಿಧಾನಗಳ ಕುರಿತು ಕೆಲವರು ಸಾಗರದ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದ್ದು ನ್ಯಾಯಾಧೀಶರು ಧರ್ಮದರ್ಶಿ ರಾಮಪ್ಪ ಹಾಗೂ ಪ್ರಧಾನ ಅರ್ಚಕ ಶೇಷಗಿರಿ ಭಟ್ ಅವರನ್ನು ನ್ಯಾಯಾಲಯಕ್ಕೆ ಕರೆಯಿಸಿ ಮಾತುಕತೆ ನಡೆಸಿ ರಾಜಿ ಸಂಧಾನದ ಮೂಲಕ ವಿವಾದವನ್ನು ಬಗೆಹರಿಸಿರುತ್ತಾರೆ. ಈ ಕಾರಣದಿಂದಲೂ ದೇವಸ್ಥಾನಕ್ಕೆ ಸಲಹಾ ಸಮಿತಿ ರಚನೆ ಅಗತ್ಯ ಇರುವುದಿಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net