

ಕೆ.ಆರ್.ನಗರ: ಕ್ಷೇತ್ರದ ವ್ಯಾಪ್ತಿಯಲ್ಲಿರುವ ಹಾರಂಗಿ ನಾಲೆಯ ಆಧುನೀಕರಣ ಕಾಮಗಾರಿಗೆ ರಾಜ್ಯ ಸರ್ಕಾರ 108 ಕೋಟಿ ರೂ. ಮಂಜೂರು ಮಾಡಿದೆ ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದರು.
ಸಾಲಿಗ್ರಾಮ ತಾಲೂಕಿನ ಸಕ್ಕರೆ ಗ್ರಾಮದ ಬಳಿ ಇರುವ ಕಾವೇರಿ ನದಿಯ ಚಾಮರಾಜ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಯ ಬಿಡುವ ಕಾರ್ಯಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ನಾಲೆ ಅಧುನೀಕರಣ ಕಾಮಗಾರಿಗೆ ಜು.19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ನಾಲೆಗಳಿಗೆ ನೀರು ಹರಿಸಿದ ನಂತರ ಇಲಾಖೆಯ ಅಧಿಕಾರಿಗಳು ಏರಿಗಳ ಮೇಲೆ ಸಂಚರಿಸಿ ರೈತರ ಜತೆ ಮಾತನಾಡಿ ಅಗತ್ಯವಿರುವೆಡೆ ಹೂಳು ತೆಗೆಸಿ ರೈತರ ಜಮೀನುಗಳಿಗೆ ಆರಂಭದಿಂದ ಅಂತ್ಯದವರೆಗೆ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು.
ನಾಲೆಗಳ ಹೂಳು ತೆಗೆಯಲು ಸರ್ಕಾರ ಪ್ರಸ್ತುತ ಪ್ರತಿ ಹೆಕ್ಟೇರ್‌ಗೆ 600 ರೂ ನೀಡುತ್ತಿದ್ದು, ಅದು ಕಾಮಗಾರಿಗೆ ಸಾಲದಾಗಿದೆ. ಈ ವಿಚಾರವನ್ನು ನಾನು ಸರ್ಕಾರದ ಗಮನಕ್ಕೆ ತಂದು ಸಂಬಂಧಪಟ್ಟ ಸಚಿವರ ಜತೆ ಚರ್ಚೆ ಮಾಡಿ ಅಗತ್ಯ ಅನುದಾನ ಕೊಡಿಸುವ ಭರವಸೆ ನೀಡಿದರು.
ಅಧಿಕಾರಿಗಳು ಅನುದಾನ ಇಲ್ಲದಿದ್ದರೂ ಸಹ ಅಗತ್ಯ ಮತ್ತು ತುರ್ತಾಗಿ ಹೂಳು ತೆಗೆಯುವ ಕಾಮಗಾರಿ ಕೈಗೊಂಡು ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ತಾಕೀತು ಮಾಡಿದ ಶಾಸಕರು ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿದರು.
ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಹೋಬಳಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 30 ಕೋಟಿ ರೂ. ಬಿಡುಗಡೆಯಾಗಿದ್ದು, ವಿವಿಧ ಕಾಮಗಾರಿಗಳು ಪ್ರಗತಿಯ ಹಂತದಲ್ಲಿದ್ದು, ಇದರ ಜತೆಗೆ ಅಗತ್ಯವಿರುವ ಮತ್ತಷ್ಟು ಅನುದಾನ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ಮುಖಂಡರಾದ ಸುನೀತಾ ರವಿಶಂಕರ್, ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಮಾಜಿ ಸದಸ್ಯ ಸಣ್ಣತಮ್ಮೇಗೌಡ, ಪಿಕಾರ್ಡ್ ಬ್ಯಾಂಕಿನ ಮಾಜಿ ಅಧ್ಯಕ್ಷ ಎನ್.ಸಿ.ಪ್ರಸಾದ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಮಾಯಿಗೌಡನಹಳ್ಳಿ ಗ್ರಾಪಂ ಅಧ್ಯಕ್ಷೆ ಶೋಭಾ ಕರಿಯಯ್ಯ, ಉಪಾಧ್ಯಕ್ಷ ದೊಡ್ಡೇಗೌಡ, ಪಿಡಿಒ ಬಿ.ಕೆ.ರಾಜೇಶ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಶಂಕರ್, ಎಂ.ಎಸ್.ಮಹದೇವ್, ಕೆ.ಆರ್.ನಗರ ಪಟ್ಟಣ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ರಮೇಶ್, ವಕ್ತಾರ ಸೈಯದ್ ಜಾಬೀರ್, ರೈತ ಮುಖಂಡರಾದ ಶ್ರೀನಿವಾಸ್, ತಿಮ್ಮಪ್ಪ, ನೇತ್ರಾವತಿ, ಜಲಸಂಪನ್ಮೂಲ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಕುಶಕುಮಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಾದ ಆಯಾಜ್‌ಪಾಷ, ಆದರ್ಶ, ರಾಜೇಂದ್ರಕುಮಾರ್, ಸಹಾಯಕ ಇಂಜಿನಿಯರ್‌ಗಳಾದ ಕೆ.ಎನ್.ಕಿರಣ್. ಕನ್ನಿಕಾ, ಉದಯ್, ರೈತರು ಹಾಜರಿದ್ದರು.