ಕಳಂಕಿತರ ರಕ್ಷಣೆಗೆ ಮುಂದಾದ ಸರ್ಕಾರ?

vidhana soudha
Published on

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್​ಸಿ) 1998,1999 ಹಾಗೂ 2004ನೇ ಸಾಲಿನ ಅಕ್ರಮ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ 2016ರ ಜೂ.21ರಂದು ಹೈಕೋರ್ಟ್ ವಿಭಾಗೀಯ ಪೀಠ ನೀಡಿರುವ ತೀರ್ಪಿನ ಮೊದಲನೇ ಅಂಶ ಜಾರಿ ಮಾಡಲು ಸಾಧ್ಯವಿಲ್ಲ ಎಂದಿರುವ ಸರ್ಕಾರ, ಹಿಂಬಡ್ತಿ ಪಡೆಯಬೇಕಾಗಿರುವ ಕಳಂಕಿತ 7 ಐಎಎಸ್ ಅಧಿಕಾರಿಗಳೂ ಸೇರಿ ಮತ್ತಿತರರ ರಕ್ಷಣೆಗೆ ಮುಂದಾಗಿದೆ. ಕೆಪಿಎಸ್​ಸಿ ಹಗರಣದ ಸಂಬಂಧ 2016ರಲ್ಲಿ ನ್ಯಾಯಮೂರ್ತಿ ಎನ್.ಕುಮಾರ್ ಹಾಗೂ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಪೀಠ ನೀಡಿದ್ದ ತೀರ್ಪು ಜಾರಿ ಗೊಳಿಸದ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿರುವ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ವೇಳೆ, ಡಿಪಿಎಆರ್ ಕಾರ್ಯದರ್ಶಿ ಪಿ. ಹೇಮಲತಾ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಈ ವಿಚಾರ ಹೇಳಲಾಗಿದೆ.

ಹೈಕೋರ್ಟ್ ತನ್ನ ತೀರ್ಪಿನ ಮೊದಲ ನಿರ್ದೇಶನದಲ್ಲಿ, ಮೂರೂ ಬ್ಯಾಚ್​ಗಳಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿದೆ. ಆದರೆ, 3 ಬ್ಯಾಚ್​ಗಳ ನೇಮಕಗಳನ್ನು ಸಂಪೂರ್ಣ ರದ್ದುಪಡಿಸಲಾಗದು. ಆದ್ದರಿಂದ, ಸರ್ಕಾರ ಹಾಗೂ ಕೆಪಿಎಸ್​ಸಿ ಕಳಂಕಿತರನ್ನು ಬೇರ್ಪಡಿಸಿ, ಅವಕಾಶ ವಂಚಿತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಹೇಳಿತ್ತು. ಈ ಅಂಶವನ್ನು ಜಾರಿ ಮಾಡಲಾಗದು ಎಂದಿರುವ ಸರ್ಕಾರ, 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ತರಾತುರಿಯಲ್ಲಿ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ, ಯಾವುದೇ ಚರ್ಚೆ ಇಲ್ಲದೆ ಅನುಮೋದಿಸಲ್ಪಟ್ಟಿರುವ ಕರ್ನಾಟಕ ನಾಗರಿಕ ಸೇವೆಗಳು (ನೇಮಕಾತಿ ವೇಳೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ) ಕಾಯ್ದೆ 2018 ಇದಕ್ಕೆ ಕಾರಣವಾಗಿದೆ ಎಂದು ಹೇಳಿದೆ. ಕಾಯ್ದೆಗೆ ರಾಜ್ಯಪಾಲರು 2019ರ ಜ.3 ರಂದು ಸಹಿ ಹಾಕಿದ್ದು ಸದ್ಯ ಅದು ಜಾರಿಯಲ್ಲಿದೆ. ಆ ಕಾಯ್ದೆ ಅನುಸಾರ 1994ರ ಮೇ 5ರ ನಂತರ ಆಯ್ಕೆ ಪ್ರಾಧಿಕಾರ ಕೈಗೊಂಡಿರುವ ಎಲ್ಲ ನೇಮಕಗಳು ಊರ್ಜಿತವಾಗಲಿವೆ. ಆ ಕಾರಣದಿಂದ ಹೈಕೋರ್ಟ್ ತೀರ್ಪಿನ ಮೊದಲ ಅಂಶ ಜಾರಿ ಮಾಡಲಾಗದು ಎಂದು ಸಮಜಾಯಿಷಿ ನೀಡಿರುವ ಸರ್ಕಾರ, ಆ ಅಧಿಕಾರಿಗಳು 13 ವರ್ಷಗಳಿಂದ ಕೆಲಸದಲ್ಲಿದ್ದಾರೆ. ಇದೀಗ ಅವರನ್ನು ತೆಗೆದರೆ ಅವರಿಗೆ ಅನ್ಯಾಯವಾಗುತ್ತದೆ ಎಂದು ಹೇಳಿದೆ.

ಈಗಾಗಲೆ 173 ಅಧಿಕಾರಿಗಳ ಇಲಾಖೆಗಳನ್ನು ಬದಲಾಯಿಸಲಾಗಿದ್ದು, ಅವರನ್ನು ಹೈಕೋರ್ಟ್ ಆದೇಶದಂತೆ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ವರ್ಗಾಯಿಸಲಾಗಿದೆ. ಆದ್ದರಿಂದ ನ್ಯಾಯಾಂಗ ನಿಂದನೆ ಆರೋಪಗಳನ್ನು ಕೈಬಿಡುವಂತೆ ಸರ್ಕಾರ ಪ್ರಮಾಣಪತ್ರದಲ್ಲಿ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net