ಜಾತಿ ಜನಗಣತಿ ವರದಿ ಲೋಪ ಪರಿಷ್ಕರಣೆಗೆ ಸರ್ಕಾರ ಸಿದ್ಧ: ಸಚಿವ ಶಿವರಾಜ್ ತಂಗಡಗಿ | BJP biased on caste census report

shivaraj tangadagi
Published on

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ದತ್ತಾಂಶ (ಜಾತಿ ಜನಗಣತಿ)ಗಳ ವರದಿಯಲ್ಲಿ ಲೋಪವಿದ್ದರೆ ಪರಿಷ್ಕರಿಸಲು ಸರ್ಕಾರ ಸಿದ್ಧವಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಹೇಳಿದರು.

ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಕಾಂತರಾಜು ವರದಿ ನೋಡಿಲ್ಲ, ಓದಿಲ್ಲ. ಆದರೂ ಬಿಜೆಪಿ ನಾಯಕರು ಸಾರಾಸಗಟು ತಿರಸ್ಕಾರ ಮಾಡುತ್ತಿರುವುದು ಎಷ್ಟು ಸರಿ ? ಎಂದು ಕೇಳಿದರು.

ಜನ ಗಣತಿಯೊಂದಿಗೆ ಜಾತಿ ಗಣತಿಗೆ ಕೇಂದ್ರ ಸರ್ಕಾರ ನಿರ್ಧರಿಸಿದ್ದನ್ನು ಸ್ವಾಗತಿಸುತ್ತೇವೆ. ರಾಜ್ಯ ಬಿಜೆಪಿ ನಾಯಕರ ರೀತಿಯಲ್ಲಿ ವಿರೋಧಿಸುವುದಿಲ್ಲ. ಕಾಂತರಾಜು ವರದಿ ಬಗ್ಗೆ ಚರ್ಚೆ, ತಪ್ಪುಗಳು ಇದ್ದರೆ ಸರಿಪಡಿಸಲು ಅವಕಾಶವಿದೆ ಎಂದರು.

ಕಾಂತರಾಜು ವರದಿಯಲ್ಲಿ ಏನಿದೆ ಎಂದು ತಿಳಿದುಕೊಳ್ಳದೆ ಬಿಜೆಪಿ ನಾಯಕರು ವಿರೋಧಿಸುತ್ತಿದ್ದಾರೆ. ಜಾತಿ, ಜಾತಿಗಳ ನಡುವೆ ಅವರೇ ವಿಷ ಬೀಜ ಬಿತ್ತುತ್ತಿದ್ದಾರೆ. ಆದರೆ ಸಾಮಾಜಿಕ ನ್ಯಾಯ ಬಯಸುವ ಸಿಎಂ ಸಿದ್ದರಾಮಯ್ಯ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಶಿವರಾಜ್ ತಂಗಡಗಿ ಟೀಕಿಸಿದರು.

ಹಿಂದುಳಿದವರ ಏಳಿಗೆಯ ಆಶಯ

ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದ ಸಮುದಾಯಗಳನ್ನು ಅಭಿವೃದ್ಧಿಯ ಮುಖ್ಯ ವಾಹಿನಿಗೆ ತರಬೇಕು ಎನ್ನುವುದು ರಾಜ್ಯ ಸರ್ಕಾರದ ಆಶಯವಾಗಿದೆ. ಪೂರಕವಾಗಿ ಕಾರ್ಯಕ್ರಮ ರೂಪಿಸಲು ಸ್ಥಿತಿಗತಿಯ ದತ್ತಾಂಶಗಳು ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕೆ.ಜಯಪ್ರಕಾಶ್ ಹೆಗ್ಡೆಯವರು ಸಲ್ಲಿಸಿದ ವರದಿಯನ್ನು ಸರ್ಕಾರ ಸ್ವೀಕರಿಸಿ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಯೋಗದ ಅಧ್ಯಕ್ಷರನ್ನಾಗಿ ಕೆ.ಜಯಪ್ರಕಾಶ್ ಹೆಗ್ಡೆಯವರನ್ನು ನೇಮಿಸಿದ್ದು, ನಾವು ಅಧಿಕಾರಕ್ಕೆ ಬಂದ ಮೇಲೆ ಬದಲಿಸಲಿಲ್ಲ ಎಂದರು.

ಬಿಜೆಪಿ ಆಡಳಿತದಲ್ಲಿದ್ದಾಗ ಆಯೋಗದ ವರದಿಯನ್ನು ಸ್ವೀಕರಿಸಲಿಲ್ಲ. ಕೆಲವು ಸಮುದಾಯಗಳಿಗೆ 2ಸಿ, 2ಡಿ ಪ್ರವರ್ಗಕ್ಕೆ ಸೇರಿಸಿದ್ದಾಗ ಎಲ್ಲವೂ ಸರಿಯಿತ್ತೆ ? ಎಂದು ಪ್ರಶ್ನಿಸಿದ ಶಿವರಾಜ್ ತಂಗಡಗಿ, ಕೇಂದ್ರ ಸರ್ಕಾರ ಕೂಡ ಅಧಿಕಾರಿಗಳಿಂದಲೇ ಜಾತಿ ಗಣತಿ ಮಾಡಿಸುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net