ಮಹಿಳಾ ಸಹಕಾರ ಸಂಘಗಳಿಗೆ ಸರ್ಕಾರದಿಂದ ಆರ್ಥಿಕ ಸೌಲಭ್ಯ

6anr2
ಆಯನೂರಿನ ಕೋಟೆ ಗ್ರಾಮದಲ್ಲಿ ಆಯನೂರು ಕೋಟಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡವನ್ನು ಶಿಮುಲ್ ಅಧ್ಯಕ್ಷ ವಿದ್ಯಾಧರ್ ಉದ್ಘಾಟಿಸಿದರು. ಶಾರದಾ ಪೂರ‌್ಯಾನಾಯ್ಕಾ, ಶೈಲಜಾ ಶಿವಮೂರ್ತಿ, ಎಚ್.ಬಿ.ದಿನೇಶ್ ಬುಳ್ಳಾಪುರ ಇತರರಿದ್ದರು.
Published on

ಆಯನೂರು: ಇತ್ತೀಚಿನ ರೈತರು ಜಾನುವಾರುಗಳ ಸಾಕಣೆಗೆ ಹಿಂದೇಟು ಹಾಕುತ್ತಿರುವುದರಿಂದ ಹಾಲಿನ ಉತ್ಪಾದನೆ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಹೇಳಿದರು.

ಆಯನೂರಿನ ಕೋಟೆ ಗ್ರಾಮದಲ್ಲಿ ಆಯನೂರು ಕೋಟೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡದಲ್ಲಿ ಪಶು ಆಹಾರ ಕೊಠಡಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಘ ಸಂಸ್ಥೆಗಳನ್ನು ಕಟ್ಟಿ ಮಹಿಳೆಯರು ಆರ್ಥಿಕವಾಗಿ ಸದೃಢರಾಗಿರುವುದು ಸಂತೋಷದ ವಿಷಯ. ಸರ್ಕಾರಗಳಿಂದಲೂ ಮಹಿಳೆಯರಿಗೆ ಸೌಲಭ್ಯ, ಅನುದಾನಗಳು ಸಿಗುತ್ತಿವೆ. ತಿರುಪತಿ ಲಡ್ಡುಗೆ ನಮ್ಮ ಕರ್ನಾಟಕದ ನಂದಿನಿ ತುಪ್ಪ ಉತ್ತಮ ಎಂದು ಸಾಬೀತಾಗಿದೆ. ತಿರುಪತಿ ದೇವಾಲಯದಲ್ಲಿ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದೆ ಎಂದು ತಿಳಿಸಿದರು.

ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಶಿಮುಲ್ ಅಧ್ಯಕ್ಷ ವಿದ್ಯಾಧರ್ ಮಾತನಾಡಿ, ಹೈನುಗಾರಿಕೆ ರೈತರ ಜೀವಾಳ. ನಂದಿನಿ ಹಾಲಿನ ಅನೇಕ ಉತ್ಪನ್ನಗಳನ್ನು ಹೆಚ್ಚು ಜನರಿಗೆ ತಲುಪಿಸುವುದು ನಮ್ಮ ಉದ್ದೇಶ. ಇದಕ್ಕಾಗಿ ಹೋಬಳಿ ಗ್ರಾಮಾಂತರ ಪ್ರದೇಶಗಳಲ್ಲಿ ನಂದಿನಿ ಪಾರ್ಲರ್ ತೆರೆಯುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಹಾಲಿಗೆ ಉತ್ತಮ ದರ ನೀಡುತ್ತೇವೆ ಎಂದರು.

ಈಗ ಪ್ರತಿ ನಿತ್ಯ 550 ಲೀ. ನೀಡುತ್ತಿರುವ ಸಂಘವು ಮುಂದಿನ ದಿನಗಳಲ್ಲಿ ಸಾವಿರ ಲೀಟರ್ ಹಾಲು ನೀಡುವಂತಹ ಸಂಘವಾಗಿ ಬೆಳೆಯಬೇಕು. ಒಕ್ಕೂಟದಿಂದ ರೈತರಿಗೆ ಸಬ್ಸಿಡಿ ಕೊಡುವ ಮೂಲಕ ಅನೇಕ ಸೌಲಭ್ಯಗಳು ನೀಡುತ್ತಿದ್ದೇವೆ ಎಂದು ತಿಳಿಸಿದರು.

ನಂದಿನಿ ಬ್ರಾೃಂಡ್ ನಮ್ಮ ಹೆಮ್ಮೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮೂರು ಜಿಲ್ಲೆ ವ್ಯಾಪ್ತಿಯಲ್ಲಿ ಮಹಿಳಾ ಸಹಕಾರ ಸಂಘಕ್ಕೆ ಪ್ರಾತಿನಿಧ್ಯ ನೀಡುತ್ತಿದ್ದೇವೆ. ಮಹಿಳೆಯರು ಸಂಘವನ್ನು ಉತ್ತಮವಾಗಿ ನಿರ್ವಹಿಸುತ್ತಾರೆ. ಕಟ್ಟಡದ ಅನುದಾನವಾಗಿ 3 ಲಕ್ಷ ರೂ. ನೀಡಿದ್ದೇವೆ. ಕೆಎಂಎಫ್‌ನಿಂದ ಮುಂದಿನ ದಿನಗಳಲ್ಲಿ ನಾಲ್ಕು ಲಕ್ಷ ರೂ. ನೀಡಲಾಗುತ್ತದೆ. ವಿದ್ಯಾಧರ್ ಶಿಮುಲ್ ಅಧ್ಯಕ್ಷ

ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಎಚ್.ಬಿ.ದಿನೇಶ್ ಬುಳ್ಳಾಪುರ ಮಾತನಾಡಿ, ಸಹಕಾರ ಸಂಘಗಳಲ್ಲಿ ಜಾತಿ, ರಾಜಕೀಯ ಬೆರೆಸಬಾರದು. ಒಕ್ಕೂಟದ 1,273 ಸಂಘಗಳಿಂದ 1,500 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸುತ್ತಿದ್ದು, ಇದರಲ್ಲಿ ಅರ್ಧದಷ್ಟು ಮಹಿಳಾ ಸಹಕಾರ ಸಂಘಗಳಿವೆ ಎಂದು ಹೇಳಿದರು.

ರೈತರಿಗೆ ನೀಡುತ್ತಿರುವ ಹಾಲಿನ ದರದ ಬಗ್ಗೆ ನಮಗೂ ನೋವಿದೆ. ರೈತರಿಗೆ ಪ್ರತಿ ಲೀಟರ್‌ಗೆ 40 ರೂ.ಗೂ ಅಧಿಕ ದರ ನೀಡಿದರೆ ಅವರಿಗೆ ನಷ್ಟವಾಗುವುದಿಲ್ಲ. ಈ ಬಗ್ಗೆ ಸರ್ಕಾರದ ಗಮನ ಸೆಳೆದು ಕನಿಷ್ಠ ಐದು ರೂ. ಹೆಚ್ಚಿಸಲಾಗುವುದು. ಸಹಕಾರ ಸಂಘಗಳಲ್ಲಿ ಪ್ರತಿ ತಿಂಗಳು ಕಡ್ಡಾಯವಾಗಿ ಮೀಟಿಂಗ್ ಮಾಡಬೇಕು. ಉಪ ಉತ್ಪನ್ನ ತುಪ್ಪ, ಪೇಡಾ, ಕೋವಾ, ಬರ್ಫಿ, ಲಸ್ಸಿ ಹಾಗೂ ನಂದಿನಿ ಚಾಕಲೇಟ್ ತಯಾರಾಗುತ್ತಿವೆ. ದಿನೇಶ್ ಬುಳ್ಳಾಪುರ ಶಿಮುಲ್ ನಿರ್ದೇಶಕ

ಆಯನೂರು ಕೋಟೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಶೈಲಜಾ ಶಿವಮೂರ್ತಿ, ಶಿಮುಲ್ ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ.ಶೇಖರ್, ಆಯನೂರು ಗ್ರಾಪಂ ಅಧ್ಯಕ್ಷ ನಿರಂಜನ್ ಗೌಡ, ಮಾಜಿ ಅಧ್ಯಕ್ಷೆ ಗಾಯತ್ರಿ ಕುಮಾರ್, ಶಿಮುಲ್ ವ್ಯವಸ್ಥಾಪಕ ಕೆ.ಆರ್.ಮುರಳೀಧರ್, ಉಪವ್ಯವಸ್ಥಾಪಕಿ ಎನ್.ಎಲ್.ದೀಪಿಕಾ, ಪ್ರಮುಖರಾದ ರೂಪಾ ಆದರ್ಶ, ಬಸವರಾಜಪ್ಪ ಗೌಡ್ರು, ಮಹಿಳಾ ಸಂಘದ ಕಾರ್ಯದರ್ಶಿ ಎಂ.ಜಯಲಕ್ಷ್ಮೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net