ರೈತರನ್ನು ಒಕ್ಕಲೆಬ್ಬಿಸಿದ ಸರ್ಕಾರ; ಬಿಜೆಪಿ ಆಕ್ರೋಶ

BJP leaders press brief about farmers problem, officers attitude
Published on

ಬೆಂಗಳೂರು: ಕೋಲಾರ ಜಿಲ್ಲೆಯ ರೈತರನ್ನು ಒಕ್ಕಲೆಬ್ಬಿಸಿ ಕೋಟ್ಯಂತರ ರೂ. ತೋಟಗಾರಿಕೆ ಹಾನಿ ಮಾಡಿದ ಕೋಲಾರ ಡಿಎಫ್ ಒ, ಈ ಸಮಸ್ಯೆಯನ್ನು ಹೇಳಲು ಹೋದ ಸಂಸದ ಎಸ್.ಮುನಿಸ್ವಾಮಿ ಅವರ ಕೋಲಾರ ಎಸ್‌ಪಿ ದೌರ್ಜನ್ಯ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೌಡಿಗಿರಿ ತೋರಿದ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು. ಇಲ್ಲವಾದರೆ ಅ.3ರಂದು ಕೋಲಾರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶ್ರೀನಿವಾಸಪುರ ತಾಲೂಕಿನ ಕೆಕ್ಕೆರೆ, ನೆಲವಂಕ ಗ್ರಾಮದ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ 40-50 ವರ್ಷಗಳಿಂದ ರೈತರು ಸಾಗುವಳಿ ಮಾಡುತ್ತಿದ್ದಾರೆ.

ಮಾವು, ರೇಷ್ಮೆ, ತೆಂಗು, ಟೊಮ್ಯಾಟೊ ಇನ್ನಿತರ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಈ ಜಮೀನಿನ ಮಾಲೀಕತ್ವ, ಸಾಗುವಳಿ ಬಗ್ಗೆ ರೈತರ ಬಳಿ ಅಧಿಕೃತ ದಾಖಲೆಗಳಿವೆ. ಅರಣ್ಯ ಇಲಾಖೆಯವರು ಅರಣ್ಯ ಜಮೀನಿದು ಎಂದು ತಗಾದೆ ತೆಗೆದ ಬೆನ್ನಲ್ಲೇ ಹೈಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದಿದ್ದರೂ ಡಿಎಫ್ ಒ ಏಡುಕೊಂಡಲವಾಡ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು.

ದಿಢೀರ್ ಕಾರ್ಯಾಚರಣೆ

ರಾತೋರಾತ್ರಿ 80ಕ್ಕೂ ಜೆಸಿಬಿಗಳನ್ನು ತೆಗೆದುಕೊಂಡು ಬಂದು ಕಾರ್ಯಾಚರಣೆ ನಡೆಸಿದ್ದಾರೆ. ಮಾವು, ತೆಂಗಿನ ಮರಗಳು, ತರಕಾರಿ ಬೆಳೆಯನ್ನು ಕಿತ್ತೆಸೆದು ಅರಣ್ಯ ಸಸಿಗಳನ್ನು ನೆಡಿಸಿ, ಸಾಗುವಳಿ ಮಾಡುತ್ತಿದ್ದ ಜಮೀನಿದು ಎಂಬ ಗುರುತೇ ಸಿಗದಂತೆ ಮಾಡಿದ್ದಾರೆ.

ಸಾವಿರಾರು ಎಕರೆಯ ಬೆಳೆಗಳ ನಾಶದಿಂದ ಕೋಟ್ಯಂತರ ರೂ. ನಷ್ಟವಾಗಿದೆ. ಒಂದು ಅಥವಾ ಅರ್ಧ ಗುಂಟೆ ಜಮೀನುಳ್ಳ ಸಣ್ಣ ರೈತರ ಬದುಕು ಬೀದಿಗೆ ಬಂದಿದೆ ಎಂದು ಎನ್.ರವಿಕುಮಾರ್ ಕರುಣಾಜನಕ ಪರಿಸ್ಥಿತಿಯನ್ನು ವಿವರಿಸಿದರು.

ರೈತ ಪರವೆಂದು ಹೇಳುವ ರಾಜ್ಯ ಸರ್ಕಾರ, ನೊಂದ ರೈತರಿಗೆ ನೆರವಾಗುವ ಬದಲು ಡಿಎಫ್ ಒ ರಕ್ಷಣೆಗೆ ನಿಂತಿದ್ದು, ಅತ್ಯಂತ ಅಮಾನವೀಯ ಧೋರಣೆಯಾಗಿದೆ ಎಂದು ಕಿಡಿಕಾರಿದರು.

ಸಂಸದರ ಮೇಲೆ ದಬ್ಬಾಳಿಕೆ

ಕೋಲಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ಸಮಕ್ಷಮ ಸೆ.25ರಂದು ನಡೆದ ಜನತಾದರ್ಶನದಲ್ಲಿ ಈ ಸಮಸ್ಯೆಯನ್ನು ಪ್ರಸ್ತಾಪಿಸಲು ಸಂಸದ ಎಸ್.ಮುನಿಸ್ವಾಮಿ ತೆರಳಿದ್ದರು.

ಸಾರ್ವಜನಿಕರು, ರೈತರ ಕುಂದು-ಕೊರತೆ ಆಲಿಸಿ ಸ್ಪಂದಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಸರ್ಕಾರ ಹೇಳಿತ್ತು. ಆದರೆ ಸ್ಥಳದಲ್ಲಿದ್ದ ಎಸ್‌ಪಿ ನಾರಾಯಣ ವ್ಯತಿರಿಕ್ತವಾಗಿ ವರ್ತಿಸಿದ್ದಾರೆ ಎಂದು ಎನ್.ರವಿಕುಮಾರ್ ದೂಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net