ಸರ್ಕಾರ ಹೊಸ ಸಂಶೋಧನೆಗಳಿಗೆ ಮುಂದು

HUN-FEB-20-1(MP VISITED TO TOBACCO MARKET)
ಹುಣಸೂರು ತಾಲೂಕು ಕಟ್ಟೆಮಳಲವಾಡಿಯ ತಂಬಾಕು ಹರಾಜು ಮಾರುಕಟ್ಟೆಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗುರುವಾರ ದಿಢೀರ್ ಭೇಟಿ ನೀಡಿ ಮಾರುಕಟ್ಟೆ ಚಟುವಟಿಕೆ ಪರಿಶೀಲಿಸಿದರು. ಎಸ್.ಬಿ.ಮೂರ್ತಿ, ನಾಗರಾಜ ಮಲ್ಲಾಡಿ, ಹರಾಜು ಅಧೀಕ್ಷಕರಾದ ಬ್ರಿಜ್ ಭೂಷಣ್, ಸಿದ್ದರಾಜು ಇತರರಿದ್ದರು.
Published on

ಹುಣಸೂರು: ತಂಬಾಕು ಉತ್ಪನ್ನಗಳ ವೆಚ್ಚ ಕಡಿಮೆ ಮಾಡುವ ದೃಷ್ಟಿಯಿಂದ ಇನ್ನಿತರ ಮಾರ್ಗಗಳನ್ನು ಸಂಶೋಧಿಸುವತ್ತ ಆದ್ಯತೆ ನೀಡಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದು, ಸರ್ಕಾರ ನೂತನ ಸಂಶೋಧನೆಗಳಿಗೆ ಮುಂದಾಗಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿರುವ ಡಿ.ದೇವರಾಜ ಅರಸು ತಂಬಾಕು ಮಾರುಕಟ್ಟೆಗೆ ಗುರುವಾರ ದಿಢೀರ್ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಎರಡು ತಿಂಗಳ ಹಿಂದೆ ತಂಬಾಕು ದರ ಕುಸಿತ ಕಂಡಿದ್ದಾಗ ನಾನು ಮತ್ತು ಮಿತ್ರ ಪಕ್ಷ ಜೆಡಿಎಸ್ ಮತ್ತು ರೈತ ಮುಖಂಡರೊಂದಿಗೆ ಕೇಂದ್ರ ವಾಣಿಜ್ಯ ಸಚಿವರನ್ನು ಭೇಟಿಯಾಗಿ ಸಮಸ್ಯೆಯನ್ನು ಆಲಿಸಿದ್ದೆವು. ಅದರ ಫಲವಾಗಿ ಇದೀಗ ಮೊದಲದರ್ಜೆಯ ತಂಬಾಕಿಗೆ ಕೆಜಿಗೆ 336 ರೂ.ಗಳವರೆಗೆ ದರ ಸಿಗುತ್ತಿದೆ. ಈ ಕುರಿತು ರೈತರು ಸಂತಸ ವ್ಯಕ್ತಪಡಿಸಿದ್ದಾರೆ ಎಂದರು.

ಕಾರ್ಡ್‌ದಾರರಿಗೆ ಮಾರಾಟಕ್ಕೆ ಅವಕಾಶ: ಇದಲ್ಲದೆ ರಾಜ್ಯದ 18 ಸಾವಿರಕ್ಕೂ ಹೆಚ್ಚನ ಸಂಖ್ಯೆಯಲ್ಲಿರುವ ಅನಧಿಕೃತ (ಕಾರ್ಡ್‌ದಾರರು) ತಂಬಾಕು ಬೆಳೆಗಾರರಿಗೆ ಈಗಿಂದಲೇ ತಂಬಾಕು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಯಾವುದೇ ದಂಡ ಶುಲ್ಕವಿಲ್ಲದೆ ಮಾರಾಟಕ್ಕೆ ಅವಕಾಶ ನೀಡಿದ್ದು, ನಮ್ಮ ಮನವಿಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರಿಗೆ ರೈತರ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ಈ ವೇಳೆ ಕೇಂದ್ರ ಸರ್ಕಾರ ರಚಿಸಿರುವ ತಜ್ಞರ ಸಮಿತಿ ಸದಸ್ಯ ಎಸ್.ಬಿ.ಮೂರ್ತಿ, ಹಿರಿಯ ಮುಖಂಡರಾದ ನಾಗರಾಜ ಮಲ್ಲಾಡಿ, ಬಿಜೆಪಿ ತಾಲೂಕು ಅಧ್ಯಕ್ಷ ಕಾಂತರಾಜು, ತಟ್ಟೆಕೆರೆ ಶ್ರೀನಿವಾಸ್, ಸತೀಶ್, ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಉಂಡುವಾಡಿ ಸಿ.ಚಂದ್ರೇಗೌಡ, ಅಗ್ರಹಾರ ನಂಜುಂಡೇಗೌಡ, ಹರಾಜು ಅಧೀಕ್ಷಕರಾದ ಬ್ರಿಜ್‌ಭೂಷಣ್, ಸಿದ್ದರಾಜು, ಮೀನಾ ಇತರರು ಹಾಜರಿದ್ದರು.

ಜೀಪ್ ಚಲಾಯಿಸಿಕೊಂಡು ಬಂದ ಸಂಸದ: ಗುರುವಾರ ತಂಬಾಕು ಹರಾಜು ಮಾರುಕಟ್ಟೆಗೆ ಸಂಸದ ಯದುವೀರ್ ತಮ್ಮ ಜೀಪ್‌ನಲ್ಲಿ ತಾವೇ ಚಾಲನೆ ಮಾಡಿಕೊಂಡು ಬಂದು ವಿಶೇಷತೆ ಮೆರೆದರು. ಕಂಪ್ಲಾಪುರದ ತಂಬಾಕು ಮಾರುಕಟ್ಟೆಯ ಭೇಟಿಯನ್ನು ಮುಗಿಸಿಕೊಂಡು ಹುಣಸೂರಿಗೆ ಆಗಮಿಸಿದ ಸಂಸದರು ಜೀಪಿನ ಡ್ರೈವರ್ ಸೀಟ್ ಬಾಗಿಲಿನಿಂದ ಇಳಿದಾಗ ಅಲ್ಲಿದ್ದವರು ಆಶ್ಚರ್ಯಚಕಿತರಾದರು. ಈಗಾಗಲೇ ಜನರ ನಡುವಯೇ ಓಡಾಡಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಸಂಸದರು ಮತ್ತೊಮ್ಮೆ ತಾವು ಜನಪ್ರತಿನಿಧಿಯೇ ಹೊರತು ಮತ್ತೇನೂ ಇಲ್ಲ ಎನ್ನುವುದನ್ನು ಸಾಬೀತುಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net