ಸರ್ಕಾರಿ ಜಮೀನು ಒತ್ತುವರಿ ಆರೋಪ: ವಿಚಾರಣೆಯಲ್ಲಿ ಭಾಗವಹಿಸಲು ಎಚ್‌ಡಿಕೆಗೆ ಅನುಮತಿ

highcourt
Published on

ಬೆಂಗಳೂರು:  ರಾಮನಗರ ಜಿಲ್ಲೆಯ ಬಿಡದಿಯ ಕೇತಗಾನಹಳ್ಳಿ ಬಳಿ ಸರ್ಕಾರಿ ಜಮೀನು ಒತ್ತುವರಿ ಆರೋಪ ಸಂಬಂಧ ಹೂಡಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯಲ್ಲಿ ಭಾಗವಹಿಸಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಹೈಕೋರ್ಟ್ ಅನುಮತಿ ನೀಡಿದೆ.

ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಮತ್ತಿತರರ ವಿರುದ್ಧದ ಭೂ ಕಬಳಿಕೆ ಆರೋಪ ಸಂಬಂಧ ಲೋಕಾಯುಕ್ತ ನೀಡಿರುವ ಆದೇಶ ಜಾರಿಗೊಳಿಸುವಲ್ಲಿ ಸರ್ಕಾರ ವಿಲವಾಗಿದೆ ಎಂದು ಆಕ್ಷೇಪಿಸಿ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯು ನ್ಯಾಯಮೂರ್ತಿ ಕೆ.ಸೋಮಶೇಖರ್ ನೇತೃತ್ವದ ವಿಭಾಗೀಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತು.

ಈ ವೇಳೆ ಎಚ್‌ಡಿಕೆ ಪರ ಹಾಜರಾದ ಹಿರಿಯ ಉದಯ್ ಹೊಳ್ಳ ವಾದ ಮಂಡಿಸಿ ಈ ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಎಚ್‌ಡಿಕೆ ವಾದ ಪರಿಗಣಿಸಬೇಕೆಂದು ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಈ ಹಿನ್ನೆಲೆ ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಪ್ರತಿವಾದಿ ಆರೋಪಿಯನ್ನಾಗಿ ಎಚ್‌ಡಿಕೆ ಅವರನ್ನು ಸೇರ್ಪಡೆ ಮಾಡಲು ಅವಕಾಶ ನೀಡಬೇಕು ಕೋರಿದರು.

ಅವರ ವಾದವನ್ನು ಮಾನ್ಯ ಮಾಡಿದ ನ್ಯಾಯಾಲಯ ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಸೂಕ್ತ ತಿದ್ದುಪಡಿ ಮಾಡುವಂತೆ ಅರ್ಜಿದಾರರಾದ ಸಮಾಜ ಪರಿವರ್ತನಾ ಸಮುದಾಯ ಪರ ವಕೀಲರಿಗೆ ಸೂಚನೆ ನೀಡಿ ವಿಚಾರಣೆಯನ್ನು ಜೂ.10ಕ್ಕೆ ಮುಂದೂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net