

ಹಾಸನ: ಚನ್ನರಾಯಪಟ್ಟಣ ತಾಲೂಕು ಬಿ. ಹೊನ್ನೇನಹಳ್ಳಿ ಗ್ರಾಮದ ಸರ್ಕಾರಿ ಜಮೀನನ್ನು ಬಲಾಢ್ಯರು ಕಬಳಿಸಲು ಯತ್ನಿಸುತ್ತಿದ್ದು ಜಿಲ್ಲಾಡಳಿತ ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.ಗ್ರಾಮದಲ್ಲಿ ಖಾಲಿ ಇರುವ 3.47 ಎಕರೆ ಪ್ರದೇಶವನ್ನು ತಾಲೂಕು ಆಡಳಿತ ಒಳ್ಳೆಯ ಉದ್ದೇಶದಿಂದ ಮೀಸಲಿಟ್ಟಿದೆ. ಅಂಗನವಾಡಿ, ಸಮುದಾಯ ಭವನ ಹೀಗೆ ಇತರ ಕಟ್ಟಡಗಳ ಮೂಲಕ ಊರಿಗೆ ಅನುಕೂಲ ಮಾಡಿಕೊಡುವ ಉದ್ದೇಶವಿದೆ. ಆದರೆ ಇತ್ತೀಚೆಗೆ ಆ ಜಾಗವನ್ನು ರಾಜಕೀಯ ಶಕ್ತಿ ಬಳಸಿಕೊಂಡು ವಶಕ್ಕೆ ಪಡೆಯಲು ಕೆಲವರು ಹವಣಿಸುತ್ತಿದ್ದಾರೆ. ಈ ಸಂಬಂದ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.