ಚಿಕ್ಕಬಳ್ಳಾಪುರ: ಬಡ್ಡಿ, ಸರ್ಕಾರಿ ಹುದ್ದೆ ಸೇರಿ ನಾನಾ ಆಮಿಷಗಳನ್ನೊಡ್ಡಿ ವಂಚಿಸುವ ಪ್ರಕರಣಗಳಿಗೇನೂ ಕಡಿಮೆ ಇಲ್ಲ. ಪ್ರತಿನಿತ್ಯ ವರದಿಯಾಗುತ್ತಲೇ ಇವೆ. ಆದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ಇಲ್ಲಿ ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿದ ವ್ಯಕ್ತಿಗೆ ಹಣ ಕೊಟ್ಟು ವಿದ್ಯಾರ್ಥಿಗಳು ಮಕ್ಮಲ್ ಟೋಪಿಸಿ ಹಾಕಿಸಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರದ ಬಿಇ ವಿದ್ಯಾರ್ಥಿಗಳಾದ ಕೆ.ಎ.ಆನಂದ ಮತ್ತು ಸಂದೀಪ್ ಸರ್ಕಾರಿ ನೌಕರಿ ಆಸೆಯಲ್ಲಿ ಹಣವನ್ನು ಕಳೆದುಕೊಂಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕನಾಗಿ ಪರಿಚಯಿಸಿಕೊಂಡು ವಂಚಿಸಿದವ ಪರಮೇಶ್ವರಪ್ಪ.
ಸಚಿವರು ಮತ್ತು ಹಿರಿಯ ಅಧಿಕಾರಿಗಳಿಗೆ ಕಮೀಷನ್ ಕೊಟ್ಟರೆ ಸರ್ಕಾರಿ ಉದ್ಯೋಗ ಸುಲಭವಾಗಿ ಸಿಗುತ್ತದೆ. ಇದನ್ನು ರಹಸ್ಯವಾಗಿ ಮಾಡಿದರೆ ಯಾವುದೇ ತೊಂದರೆಯಾಗುವುದಿಲ್ಲ. ನಿಮಗೆ ಉದ್ಯೋಗ ಬೇಕಿದ್ದರೆ ಹಣ ಕೊಡಿ ಎಂದ ಆರೋಪಿ ಪರಮೇಶ್ವರಪ್ಪ, ಆನ್ ಲೈನ್ ನಲ್ಲಿ ಅರ್ಜಿ ತುಂಬಲು ಇಬ್ಬರಿಂದ 5 ಸಾವಿರ ರೂ, ಬಳಿಕ 36 ಸಾವಿರ ರೂಗಳನ್ನು ಪಡೆದುಕೊಂಡಿದ್ದಾನೆ. ಬಳಿಕ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಸರ್ಕಾರಿ ಉದ್ಯೋಗ ಕೊಡಿಸುವ ಹೆಸರಿನಲ್ಲಿ ತಮಗೆ ವಂಚಿಸಿರುವ ವ್ಯಕ್ತಿಯನ್ನು ಬಂಧಿಸಿ, ನ್ಯಾಯ ದೊರಕಿಸಿಕೊಡಬೇಕು ಎಂದು ವಂಚನೆಗೊಳಗಾದ ಕೆ.ಎ.ಆನಂದ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.