ಕಾಲ್ತುಳಿತ ದುರಂತಕ್ಕೆ ಸರ್ಕಾರವೇ ಹೊಣೆ: ಆರ್.ಅಶೋಕ್ ಆರೋಪ | Rs 25 lakh compensation urge

LOP R Ashok
Published on

ಬೆಂಗಳೂರು: ಚಿನ್ನಸ್ವಾಮಿ ಬಳಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಅಮಾಯಕರು ಬಲಿಯಾಗಿರುವುದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಆಪಾದಿಸಿದ್ದಾರೆ.

ಬೆಂಗಳೂರಿನ ಬೌರಿಂಗ್, ವೈದೇಹಿ ಆಸ್ಪತ್ರೆಗಳಿಗೆ ಬುಧವಾರ ಭೇಟಿ ಮಾಡಿದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಐಪಿಎಲ್ ಪಟ್ಟ ಗೆದ್ದ ಆರ್‌ಸಿಬಿ ತಂಡಕ್ಕೆ ಅಭಿನಂದನೆ ಸಲ್ಲಿಸಿ ಸಂಭ್ರಮಿಸುವ ಘಳಿಗೆ ಸೂತಕದ ಘಳಿಗೆಯಾಗಿ ಮಾರ್ಪಟ್ಟಿದೆ ಎಂದು ಮಮ್ಮಲ ಮರುಗಿದರು.

ದೇಶದ ಆಸ್ತಿಯಾಗಿದ್ದ ಯುವಜನರು ಮೃತಪಟ್ಟಿದ್ದಾರೆ ಎಂದು ವಿಷಾದಿಸಿದ ಆರ್.ಅಶೋಕ್, ಮೃತ ದುರ್ದೈವಿಗಳ ಕುಟುಂಬದಲ್ಲಿ ಇಡೀ ರಾಜ್ಯವೇ ಭಾಗಿಯಾಗಿದೆ ಎಂದರು.

ಕನ್ನಡಿಗರ ಜನಪ್ರಿಯ ಆರ್‌ಸಿಬಿ ಗೆಲುವಿನ ಸಾಧನೆಯಲ್ಲಿ ತಾನೂ ಕ್ರೆಡಿಟ್ ಪಡೆಯಬೇಕು ಎಂಬ ಆತುರದಲ್ಲಿ ಸರ್ಕಾರ ಯೋಜಿತ ತಯಾರಿ, ಪೂರ್ವಸಿದ್ಧತೆಯಿಲ್ಲದ, ವಿವೇಚನಾರಹಿತ ನಿರ್ಧಾರ ಮಾಡಿದ್ದೇ ಮುಗ್ಧ ಜೀವಗಳನ್ನು ಬಲಿ ಪಡೆದಿದೆ ಎಂದು ದೂರಿದರು.

25 ಲಕ್ಷ ರೂ. ಪರಿಹಾರಕ್ಕೆ ಒತ್ತಾಯ

ಈ ಸಾವುಗಳಿಗೆ ರಾಜ್ಯ ಸರ್ಕಾರ ಹೊಣೆ ಹೊತ್ತು ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು ಗಾಯಾಳುಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸಬೇಕು ಎಂದು ಆರ್.ಅಶೋಕ್ ಒತ್ತಾಯಿಸಿದರು.

ೈನಲ್ ಪಂದ್ಯ ಮಂಗಳವಾರ ರಾತ್ರಿಯಷ್ಟೇ ಮುಗಿದಿದೆ. ಬೆಂಗಳೂರು ಸೇರಿ ಹಲವೆಡೆ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ರಾತ್ರಿಯೆಲ್ಲ ಶ್ರಮಿಸಿದ್ದರು. ಬುಧವಾರ ಬೆಳಗ್ಗೆ ಏಕಾಏಕಿ ಮತ್ತೊಮ್ಮೆ ದೊಡ್ಡಮಟ್ಟದ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಿ ಎಂದರೆ ಕಷ್ಟ ಸಾಧ್ಯವೆಂಬ ಕನಿಷ್ಠಜ್ಞಾನ ಸರ್ಕಾರಕ್ಕೆ ಇಲ್ಲದೇ ಹೋದದ್ದು ಬೇಜವಾಬ್ದಾರಿತನ ಎಂದು ಕಿಡಿಕಾರಿದರು.

ರಾಜೀನಾಮೆ ನೀಡಲಿ

ಕಾರ್ಯಕ್ರಮ, ವಿಜಯಯಾತ್ರೆ ಆಯೋಜನೆ ಬಗ್ಗೆ ಸರ್ಕಾರಕ್ಕೆ ಕೊನೆಯವರೆಗೂ ಸ್ಪಷ್ಟತೆಯೇ ಇರಲಿಲ್ಲ. ಕ್ರೀಡಾಂಗಣದ ಬಳಿ ಅಂಬುಲೆನ್ಸ್, ಅಗ್ನಿಶಾಮಕ ವಾಹನಗಳು ಇರಲಿಲ್ಲ. ಅವಘಡಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಸರ್ಕಾರ ಉತ್ತರಿಸಬೇಕಾದ ಪ್ರಶ್ನೆಗಳ ಸರಣಿಯೇ ಇದೆ ಎಂದುರು.

ಆರ್‌ಸಿಬಿ ತಂಡ ಸ್ವಾಗತಿಸಲು, ನೆಚ್ಚಿನ ಆಟಗಾರರನ್ನು ನೋಡಲು, ಸಂಭ್ರಮದಲ್ಲಿ ಪಾಲ್ಗೊಳ್ಳಲು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಾರೆ ಎಂದು ಅಂದಾಜು ಮಾಡುವಲ್ಲಿ ಸರ್ಕಾರ ಎಡವಿದೆ.

ಜನಸಂದಣಿ ನಿರೀಕ್ಷಿಸಿ ಹೆಚ್ಚಿನ ಕಾಲಾವಕಾಶ ತೆಗೆದುಕೊಂಡು ವಾರಾಂತ್ಯದಲ್ಲಿ ಈ ಕಾರ್ಯಕ್ರಮ ಮಾಡಬಹುದಿತ್ತು. ಪ್ರಚಾರದ ತೆವಲಿಗೆ ಅಮಾಯಕರನ್ನು ಬಲಿ ತೆಗೆದುಕೊಂಡ ಸಿಎಂ, ಡಿಸಿಎಂ, ಗೃಹ ಸಚಿವರಿಗೆ ಮಾನವೀಯತೆ, ಆತ್ಮಸಾಕ್ಷಿಯಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಆರ್.ಅಶೋಕ್ ವಾಗ್ದಾಳಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net