

ಬೆಂಗಳೂರು: ವಿವಿಧ ಅಭಿವೃದ್ಧಿ ನಿಗಮ-ಮಂಡಳಿಗಳಿಗೆ 1055 ಕೋಟಿ ರೂ., ಕೃಷಿ ಇಲಾಖೆಗೆ 2,253 ಕೋಟಿ ರೂ., ತೋಟಗಾರಿಕೆ, ಸಹಕಾರ, ಗ್ರಾಮೀಣಾಭಿವೃದ್ಧಿ ಇಲಾಖೆಗಳಿಗೆ ಒಟ್ಟು 600 ಕೋಟಿ ರೂ., ಕಂದಾಯ ಇಲಾಖೆಗೆ 500 ಕೋಟಿ ರೂ., ಲೋಕೋಪಯೋಗಿ ಹಾಗೂ ಜಲ ಸಂಪನ್ಮೂಲ ಇಲಾಖೆಗಳಿಗೆ ತಲಾ 2,700 ಕೋಟಿ ರೂ ಅನುದಾನ ಕಡಿತ ಮಾಡಿದ್ದರಿಂದ ನೆರವು ವಂಚಿತ ಬಡವರು, ರೈತರು ಸಾಲಕ್ಕಾಗಿ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಮೊರೆ ಹೋಗಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ತೀಕ್ಷ್ಣವಾಗಿ ವಿಮರ್ಶಿಸಿದರು.
ವಿಧಾನಸೌಧದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಕಂಪನಿಗಳು ಪರಿಸ್ಥಿತಿಯ ದುರ್ಲಾಭ ಪಡೆದು, ಬಡವರು, ರೈತರಿಗೆ ದುಬಾರಿ ಬಡ್ಡಿ ದರದಲ್ಲಿ ಸಾಲ ನೀಡಿವೆ. ಸಾಲ ಮರು ಪಾವತಿ ವಿಳಂಬ, ಬಡ್ಡಿ ಹೊರೆಯಿಂದ ಸಾಲಗಾರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಮೈಕ್ರೋ ಫೈನಾನ್ಸ್ ಹಾವಳಿಗೆ ಕಾಂಗ್ರೆಸ್ ಸರ್ಕಾರ ನೇರ ಹೊಣೆಯಾಗಿದೆ ಎಂದು ವಾಗ್ದಾಳಿ ಮಾಡಿದರು.
ಕಿರುಕುಳ ತಾಳದೆ ಹಲವರು ಆತ್ಮಹತ್ಯೆ, ನೊಂದವರು ಮನೆಗಳಿಗೆ ಬೀಗ ಹಾಕಿಕೊಂಡು ಊರು ಖಾಲಿ ಮಾಡುತ್ತಿದ್ದಾರೆ. ನೊಂದವರ ಅಳಲು, ಉಪಟಳದಿಂದ ತಲ್ಲಣಿಸುವಂತಾಗಲು ಸರ್ಕಾರದ ಬೊಕ್ಕಸ ಬರಿದು, ಆಡಳಿತ ವೈಫಲ್ಯ ಕಾರಣವೆಂದು ಕಿಡಿಕಾರಿದರು.
ಗ್ಯಾರಂಟಿ ಯೋಜನೆಗಳಿಂದ ಬಡವರು ಹಾಗೂ ಮಹಿಳೆಯರ ಬದುಕಿನಲ್ಲಿ ಬದಲಾವಣೆಯಾಗಿದೆ. ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ ಎಂದು ಸರ್ಕಾರ ಹೇಳಿಕೊಂಡಿದ್ದು, ಗೃಹಲಕ್ಷ್ಮಿ ಹಣದಲ್ಲಿ ಹೋಳಿಗೆ ಊಟ, ಫ್ರಿಜ್, ದ್ವಿಚಕ್ರ ವಾಹನ ಖರೀದಿಸಿದವರ ಫೋಟೊಗಳನ್ನು ಹಾಕಿಕೊಂಡು ಪ್ರಚಾರ ಪಡೆದು, 15 ಇಲಾಖೆಗಳಿಗೆ ಒಟ್ಟು 14 ಸಾವಿರ ಕೋಟಿ ರೂ. ಅನುದಾನ ಕಡಿತವನ್ನು ಮುಚ್ಚಿಟ್ಟರು.
ಆದರೆ, ಮೈಕ್ರೋ ಫೈನಾನ್ಸ್ ಕಂಪನಿಗಳು, ಖಾಸಗಿ ಬ್ಯಾಂಕ್ ಗಳು, ಶೇಕಡ 60ರಷ್ಟು ಕಮಿಷನ್ ಮಾಫಿಯಾ ಹಿಡಿತಕ್ಕೆ ಸರ್ಕಾರ ಸಿಲುಕಿದೆ. ಮೈಕ್ರೋ ಫೈನಾನ್ಸ್ ಕಂಪನಿಗಳು ಹೆಚ್ಚಿನ ಪ್ರಮಾಣದ ಸಾಲ, ಅತಿಯಾದ ಬಡ್ಡಿ ವಿಧಿಸಿ ಬಲವಂತದ ವಸೂಲಿಗೆ ಇಳಿದಿರುವುದಕ್ಕೂ ಇದೇ ಕಾರಣವೆಂದು ಆರೋಪಿಸಿದರು.
ಹಿಂದೆಂದೂ ಇಲ್ಲದ ಮೈಕ್ರೋ ಫೈನಾನ್ಸ್ ಕಂಪನಿಗಳು ಈಗ ದಬ್ಬಾಳಿಕೆ ಹೆಚ್ಚಾಗಲು ಕಾರಣವೇನು ?, ಗರಿಷ್ಠ ಪ್ರಮಾಣ ಸಾಲ, ಒಂದೇ ಕುಟುಂಬಕ್ಕೆ ಬೇರೆ ಬೇರೆ ಗುರುತಿನ ಚೀಟಿಯಡಿ ಸಾಲ ಕೊಟ್ಟು, ಸಾಲಗಾರರ ದುರ್ಬಳಕೆಗೆ ಮುಂದಾಗಿದ್ಹೇಗೆ ? ಎಂಬ ಪ್ರಶ್ನೆಗಳಿಗೆ ಒಂದೇ ಉತ್ತರ. ಅದು, ರಾಜ್ಯ ಸರ್ಕಾರವೆಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಮಾನ್ಯವಾಗಿ ಪ್ರತಿ ವರ್ಷದ ಬಜೆಟ್ ನಲ್ಲಿ ಇಲಾಖೆಗಳಿಗೆ ಸರಾಸರಿ ಶೇ. 20 ರಷ್ಟು ಅನುದಾನ ಹೆಚ್ಚಳವಾಗುತ್ತದೆ. ಆದರೆ ಕಾಂಗ್ರೆಸ್ ಸರ್ಕಾರ ತದ್ವಿರುದ್ಧವಾಗಿ ಕಡಿತ ಮಾಡಿದೆ. ಅನುದಾನ, ಅಭಿವೃದ್ಧಿ ವಿಷಯ ಪ್ರಸ್ತಾಪಿಸಿದಾಗಲೆಲ್ಲ ಕೇಂದ್ರದೆಡೆ ಬೊಟ್ಟು ತೋರಿಸುತ್ತಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಸಂಪುಟದ ಸದಸ್ಯರು ಅಸಹಾಯಕತೆ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಆರ್.ಅಶೋಕ್ ಛೇಡಿಸಿದರು.
ಹತ್ಯೆ, ಆತ್ಮಹತ್ಯೆಗಳ ವಿಷಯ ಪ್ರಸ್ತಾಪಿಸಿದರೆ ಬಿಜೆಪಿ ಅವಧಿಯಲ್ಲಿ ಆಗಿರಲಿಲ್ಲವೆ ? ಎಂದು ಮರು ಪ್ರಶ್ನೆ ಮಾಡುತ್ತಿದ್ದಾರೆ. ಬಿಜೆಪಿ ಅಧಿಕಾರದ ಅವಧಿಯಲ್ಲಿ ಏನೆಲ್ಲ ತಪ್ಪುಗಳಾಗಿವೆ ಎಂಬ ಭರವಸೆ ನೀಡಿ ಅಧಿಕಾರಕ್ಕೆ ಬಂದವರು ಅಧೋಗತಿಗೆ ಇಳಿದಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.