

ಕಡೂರು: ಮುಂಗಾರು ವೈಲ್ಯದಿಂದ ತಾಲೂಕಿನಾದ್ಯಂತ ರೈತರಿಗೆ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಬೆಳೆಯಿಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದರು. ಇದೇ ಸಂದರ್ಭ ಅತಿ ಹಿಂದುಳಿದ ತಾಲೂಕು ಕಡೂರನ್ನು ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಸೇರಿಸಿರುವುದು ನಿಟ್ಟುಸಿರು ಬಿಡುವಂತಾಗಿದೆ ಎಂದು ಕಡೂರು ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮೊಹ್ಮದ್ ಅಬಿದ್ ಪಾಷಾ ತಿಳಿಸಿದರು.
ಬರದ ಛಾಯೆ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಅವರು ಕ್ಷೇತ್ರದಲ್ಲಿನ ನೀರಿನ ಸಮಸ್ಯೆ ಹಾಗೂ ಬಿತ್ತನೆ ಕುಂಠಿತವಾಗಿರುವ ಸಮಗ್ರ ಮಾಹಿತಿಯನ್ನು ಸರ್ಕಾರಕ್ಕೆ ತಲುಪಿಸಿದ್ದರು. ಈ ಹಿನ್ನೆಲೆಯಲ್ಲಿ ಬರಪೀಡಿತ ಪ್ರದೇಶವೆಂದು ಘೋಷಣೆಯಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಾಸಕ ಕೆ.ಎಸ್.ಆನಂದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವರನ್ನು ಖುದ್ದು ಭೇಟಿ ಮಾಡಿ ತಾಲೂಕಿನ ಬರ ಪರಿಸ್ಥಿತಿ ಬಗ್ಗೆ ವಿವರಿಸಿದರೆ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಶಿಾರಸು ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪೂರಕ ವರದಿ ಪಡೆದುಕೊಂಡು ಕಡೂರು ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಿದೆ ಎಂದರು.
ತಾಲೂಕಿನಲ್ಲಿ ಬಹುಮುಖ್ಯವಾಗಿ ತೆಂಗು ಬೆಳೆಗಾರರು ಸೂಕ್ತ ಬೆಲೆ ಇಲ್ಲದೆ ಕಂಗಲಾಗಿದ್ದಾರೆ. ಈ ಬಗ್ಗೆ ತೆಂಗು ಮತ್ತು ಕೊಬ್ಬರಿ ಸ್ಥಿತಿಗತಿ ಬಗ್ಗೆ ಶಾಸಕರು ಸಂಬಂಧಿಸಿದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ತೆಂಗು ಬೆಳೆಗಾರರ ಹಿತಕಾಪಾಡಲು ಬದ್ಧರಾಗಿದ್ದಾರೆ ಎಂದರು. ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಇಮ್ರಾನ್ ಖಾನ್ ಇದ್ದರು.