ವಾಟ್ಸ್​ಆ್ಯಪ್​ಗೆ ಸರ್ಕಾರ ಸೆಡ್ಡು: ಕೇಂದ್ರದಿಂದ 2 ಮೆಸೆಂಜರ್ ಆ್ಯಪ್​ ಅಭಿವೃದ್ಧಿ; ಬೀಟಾ ಪರೀಕ್ಷೆ ಆರಂಭ..

Sandesh
Published on

ನವದೆಹಲಿ: ಖಾಸಗಿತನ ನೀತಿ, ರೈತರ ಪ್ರತಿಭಟನೆಗೆ ಪ್ರಚೋದನೆ ನೀಡಿದ ಹಿನ್ನೆಲೆಯಲ್ಲಿ ಟ್ವಿಟರ್ ಬಗ್ಗೆ ಕಠಿಣ ನಿಲುವು ತಳೆದಿರುವ ಕೇಂದ್ರ ಸರ್ಕಾರ ಈಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ವಾಟ್ಸ್​ಆಪ್ ಮಾದರಿಯ ಎರಡು ಆಪ್ಲಿಕೇಷನ್​ಗಳನ್ನು ಸರ್ಕಾರ ಸಿದ್ಧಪಡಿಸಿದ್ದು, ಇದಕ್ಕೆ ’ಸಂವಾದ್’ ಮತ್ತು ‘ಸಂದೇಶ್’ ಎಂದು ಹೆಸರಿಸಿದೆ. ಹೆಸರೇ ಸೂಚಿಸುವಂತೆ ಸಂವಾದ್ ಚಾಟಿಂಗ್ ಆಪ್ ಆಗಿದ್ದರೆ, ಸಂದೇಶ್, ಮೆಸೇಜಿಂಗ್ ಆಪ್ ಆಗಿದೆ. ಈ ಎರಡೂ ಆಪ್​ಗಳ ಬೀಟಾ ಹಂತದ ಪರೀಕ್ಷೆ ನಡೆಯುತ್ತಿವೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ) ಖಚಿತ ಪಡಿಸಿದೆ. ಬೀಟಾ ಪರೀಕ್ಷೆ ಯಶಸ್ವಿಯಾದ ನಂತರ ಪ್ರಧಾನಿ ನರೇಂದ್ರ ಮೋದಿ ಈ ಅಪ್ಲಿಕೇಷನ್​ಗಳಿಗೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ.

ಆತ್ಮನಿರ್ಭರ ಭಾರತದ ಭಾಗವಾಗಿ ಹೊಸ ಆಪ್​ಗಳನ್ನು ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್​ಐಸಿ) ಅಭಿವೃದ್ಧಿ ಪಡಿಸಿದೆ. ಸರ್ಕಾರವೇ ಆಪ್​ಗಳನ್ನು ಅಭಿವೃದ್ಧಿಪಡಿಸಿ ನಿರ್ವಹಿಸುವುದರಿಂದ ಡೇಟಾ ಕಳವಿನ ಆತಂಕ ದೂರವಾಗುತ್ತದೆ ಮತ್ತು ಖಾಸಗಿ ತಂತ್ರಜ್ಞಾನ ಸಂಸ್ಥೆಗಳಿಗೆ ಇರುವ ವಾಣಿಜ್ಯ ಲಾಭದ ಉದ್ದೇಶ ಇರುವುದಿಲ್ಲ ಎಂದು ಸಚಿವಾಲಯದ ಮೂಲಗಳು ಹೇಳಿವೆ. ವಿದೇಶಿ ಸಾಮಾಜಿಕ ಜಾಲತಾಣಗಳಿಗೆ ಪರ್ಯಾಯವಾಗಿ ಸರ್ಕಾರವೇ ಹೊಸದೊಂದು ತ್ವರಿತ ಸಂದೇಶ ಸೇವೆಯನ್ನು ಜಾಲತಾಣದಲ್ಲಿ ಆರಂಭಿಸುವ ಬಗ್ಗೆ ಬಹು ಹಿಂದೆಯೇ ಚಿಂತಿಸಿತ್ತು. ಇದೇ ರೀತಿ ಕೇಂದ್ರದ ಉದ್ಯೋಗಿಗಳ ಮಧ್ಯೆ ಸಂವಹನಕ್ಕಾಗಿ ಪ್ರತ್ಯೇಕವಾದ ಆನ್​ಲೈನ್ ವೇದಿಕೆಯ ಬಹುಕಾಲದ ಅವಶ್ಯಕತೆ ಬಗ್ಗೆ ಸರ್ಕಾರ ಈಗ ಆಲೋಚಿಸಿದೆ ಎಂದು ಮೂಲಗಳು ತಿಳಿಸಿವೆ.

‘ಸಂದೇಶ್’ ಆಪ್​ನ್ನು ಪರೀಕ್ಷಾರ್ಥವಾಗಿ ಕೆಲವು ಸರ್ಕಾರಿ ಅಧಿಕಾರಿಗಳಿಗೆ ಆಪಲ್ ಸ್ಟೋರ್​ನಲ್ಲಿ ಲಭ್ಯ ಮಾಡಲಾಗಿದೆ. ಇದರ ಲೋಗೋ ನೀಲಿ ಮತ್ತು ಬಿಳಿ ಬಣ್ಣಗಳ ಸಂಯೋಜನೆಯಿಂದ ಕೂಡಿದ್ದು, ಅಶೋಕ ಚಕ್ರವನ್ನು ಒಳಗೊಂಡಿದೆ ಎಂದು ಮೂಲಗಳು ಹೇಳಿವೆ. ಸರ್ಕಾರದ ಹೊಸ ಆಪ್​ಗಳನ್ನು ಜನರು ಎಷ್ಟರ ಮಟ್ಟಿಗೆ ಬಳಕೆ ಮಾಡುತ್ತಾರೆ ಎಂಬುದು ಈ ಆಪ್​ಗಳು ಸಾರ್ವಜನಿಕವಾಗಿ ಚಾಲನೆಗೊಂಡ ನಂತರವಷ್ಟೆ ತಿಳಿಯುತ್ತದೆ.

ಸರ್ಕಾರಿ ಉದ್ಯೋಗಿಗಳಿಗೆ ಜಿಮ್ಸ್​: ಕೇಂದ್ರ ಸರ್ಕಾರದ ಅಧಿಕಾರಿಗಳು ಮತ್ತು ನೌಕರರ ಮಧ್ಯೆ ಸಂವಹನಕ್ಕಾಗಿ ‘ಗವರ್ನಮೆಂಟ್ ಇನ್​ಸ್ಟಂಟ್ ಮೆಸೇಜಿಂಗ್ ಸರ್ವೀಸ್’ (ಜಿಮ್ಸ್) ಹೆಸರಿನ ಅಪ್ಲಿಕೇಷನ್​ನ್ನು ಕೇಂದ್ರ ಅಭಿವೃದ್ಧಿ ಪಡಿಸಲು ಮುಂದಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಗೊಂದಲ: ‘ಸಂವಾದ್’ ಮತ್ತು ‘ಸಂದೇಶ್’ ಒಂದೇ ಅಪ್ಲಿಕೇಷನ್​ಗಳೇ ಅಥವಾ ಬೇರೆ ಬೇರೆಯೇ ಎಂಬ ಗೊಂದಲ ಇದೆ. ‘ಸಂದೇಶ್’ನ್ನು ಕೆಲವು ಅಧಿಕಾರಿಗಳ ಬಳಕೆಗೆ ಪರೀಕ್ಷಾರ್ಥವಾಗಿ ಬಿಡುಗಡೆ ಮಾಡಿರುವ ಕಾರಣ ಇದು ಸರ್ಕಾರಿ ಉದ್ಯೋಗಿಗಳಿಗೆ ಇರುವ ಪ್ರತ್ಯೇಕ ವೇದಿಕೆ ಎನ್ನಲಾಗುತ್ತಿದೆ. ಹಾಗಿದ್ದರೆ ‘ಜಿಮ್್ಸ’ ಆಪ್ಲಿಕೇಷನ್ ಯಾರಿಗಾಗಿ ಎಂಬ ಪ್ರಶ್ನೆಯೂ ಇದೆ.

  • ಹೊಸ ಆಪ್​ನಿಂದ ಆತ್ಮನಿರ್ಭರ ಪರಿಕಲ್ಪನೆಗೆ ಬಲ
  • ವಿದೇಶಿ ತಂತ್ರಜ್ಞಾನ ಕಂಪನಿಗಳ ಮೇಲೆ ಅವಲಂಬನೆ ಅಗತ್ಯವಿಲ್ಲ
  • ಖಾಸಗಿತನಕ್ಕೆ ಧಕ್ಕೆ, ಡೇಟಾ ಹಾಗೂ ಮಾಹಿತಿ ಸೋರಿಕೆ ಭಯ ಇಲ್ಲ
  • ಆಕ್ಷೇಪಾರ್ಹ ಅಂಶಗಳು, ದೇಶ ವಿರೋಧಿ ಪೋಸ್ಟ್, ಪ್ರಚೋದನಾಕಾರಿ ಬರಹ ಮೇಲೆ ನಿಯಂತ್ರಣ ಸುಲಭ

ವಾಟ್ಸ್​ಆ್ಯಪ್​ಗೆ ಪರ್ಯಾಯ

ಖಾಸಗಿತನ ಹಕ್ಕಿಗೆ ಧಕ್ಕೆ ತರುವಂತಹ ಹೊಸ ನೀತಿಯ ಕಾರಣ ಫೇಸ್​ಬುಕ್ ಒಡೆತನದ ವಾಟ್ಸ್ ಆಪ್ ಈಗ ವಿವಾದದಲ್ಲಿ ಸಿಲುಕಿಕೊಂಡಿದೆ. ವಾಟ್ಸ್ ಆ್ಯಪ್​  ಬಳಕೆದಾರರ ಡೇಟಾವನ್ನು ಫೇಸ್​ಬುಕ್ ಜತೆ ಹಂಚಿಕೊಳ್ಳುತ್ತದೆ ಎಂಬುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ನಂತರ ಫೆ. 8ರಿಂದ ಜಾರಿಗೆ ತರಲು ಉದ್ದೇಶಿಸಿದ್ದ ಹೊಸ ಖಾಸಗಿ ನೀತಿಯನ್ನು ಮೇ ಎರಡನೇ ವಾರಕ್ಕೆ ಮುಂದೂಡಿದೆ. ಈ ಮಧ್ಯೆ, ಜನರ ಖಾಸಗಿತನದ ಹಕ್ಕು ರಕ್ಷಣೆ ವಿಷಯದಲ್ಲಿ ವಾಟ್ಸ್ ಆ್ಯಪ್​ ನೀತಿ ಬಗ್ಗೆ ಮಧ್ಯಪ್ರವೇಶ ಔಚಿತ್ಯಪೂರ್ಣ ಎಂದು ಸುಪ್ರೀಂಕೋರ್ಟ್ ಕೂಡ ಹೇಳಿದೆ. ಇಂತಹ ಸಂದರ್ಭದಲ್ಲಿ ಸರ್ಕಾರವೇ ಮೈಕ್ರೋ ಬ್ಲಾಗಿಂಗ್ ಅಪ್ಲಿಕೇಷನ್ ಅಭಿವೃದ್ಧಿ ಪಡಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ. ಇನ್ನೊಂದೆಡೆ ಟ್ವಿಟರ್ ಮತ್ತು ಸರ್ಕಾರದ ಮಧ್ಯೆ ಜಟಾಪಟಿ ಉಂಟಾಗಿದೆ. ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರಚೋದನಕಾರಿ ಟ್ವೀಟ್ ಮಾಡುವಂತಹವರ ಖಾತೆ ಸ್ಥಗಿತಕ್ಕೆ ಕೇಂದ್ರ ಸರ್ಕಾರ ಸೂಚಿಸಿದೆ. ಆದರೆ ಇದನ್ನು ಟ್ವಿಟರ್ ಒಲ್ಲದ ಮನಸ್ಸಿನಿಂದಲೇ ಮಾಡಿದೆ. ಟ್ವಿಟರ್ ಬದಲಿಗೆ ‘ಕೂ’ ವೇದಿಕೆಯನ್ನು ಅಧಿಕೃತವಾಗಿ ಬಳಸಲಾಗುವುದು ಎಂದು ಸರ್ಕಾರ ಕಳೆದವಾರ ತಿಳಿಸಿದೆ. ಬೆಂಗಳೂರು ಮೂಲದ ಸ್ಟಾರ್ಟಪ್ ಇದನ್ನು ಅಭಿವೃದ್ಧಿ ಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net