

ಪಿರಿಯಾಪಟ್ಟಣ: ಪ್ರತಿ ವರ್ಷ ಎಲ್ಲ ಸರ್ಕಾರಿ ನೌಕರರು ತಮ್ಮ ಚರಾಸ್ಥಿ ಮತ್ತು ಸ್ಥಿರಾಸ್ತಿ ವರದಿಯನ್ನು ಸರ್ಕಾರಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಮೈಸೂರಿನ ಲೋಕಾಯುಕ್ತ ಇನ್ಸ್‌ಪೆಕ್ಟರ್ ರೂಪಾಶ್ರೀ ತಿಳಿಸಿದರು.
ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹದ ಅಂಗವಾಗಿ ಲೋಕಾಯುಕ್ತ ಇಲಾಖೆ ಅಧಿಕಾರಿಗಳು ಪಟ್ಟಣದ ತಾಲೂಕು ಕಚೇರಿಗೆ ಶನಿವಾರ ಭೇಟಿ ನೀಡಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಲ್ಲಿ ಜಾಗೃತಿ ಮೂಡಿಸಿ ಮಾತನಾಡಿದರು.
ಭ್ರಷ್ಟಾಚಾರ ಮುಕ್ತ ಸಮಾಜದ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕಿದೆ. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸಗಳಿಗಾಗಿ ಲಂಚ ಪಡೆಯಬಾರದು. ಸರ್ಕಾರಿ ನೌಕರರು ಉದಾಸೀನ ಮನೋಭಾವ ತೋರದೆ ಸಾರ್ವಜನಿಕ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸಬೇಕು. ಸರ್ಕಾರಿ ಸೇವೆ ಬಯಸಿ ವಿವಿಧ ಇಲಾಖೆಗಳಿಗೆ ಬರುವ ರೈತರಿಗೆ ಕಾಯಿಸದೆ ಮತ್ತು ರೈತರಿಂದ ಲಂಚ ಪಡೆಯದೆ ಶೀಘ್ರ ಅವರ ಸಮಸ್ಯೆ ಬಗೆಹರಿಸಬೇಕು. ಎಲ್ಲಿ ಭ್ರಷ್ಟಾಚಾರದ ದೂರು ಕೇಳಿ ಬರುತ್ತದೆಯೋ ಅಲ್ಲಿ ಲೋಕಾಯುಕ್ತ ಇಲಾಖೆಯು ದಾಳಿ ನಡೆಸಿ ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಸಿದರು.
ತಹಸೀಲ್ದಾರ್ ಕುಂಇ ಅಹಮದ್ ಮಾತನಾಡಿ, ಸರ್ಕಾರಿ ನೌಕರರು ಕಾನೂನಿಗೆ ಅನುಗುಣವಾಗಿ ನಿಯಮ ಮೀರದಂತೆ ಹಾಗೂ ದೂರುಗಳು ಬರದಂತೆ ಎಚ್ಚರ ವಹಿಸಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಭ್ರಷ್ಟಾಚಾರ ನಿರ್ಮೂಲನೆಯಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ನೌಕರರಿಗೆ ಭ್ರಷ್ಟಾಚಾರ ವಿರುದ್ಧ ಜಾಗೃತಿ ಮೂಡಿಸುವ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಶಿರಸ್ತೇದಾರ್ ಗಳಾದ ಶಕೀಲಾಬಾನು, ವಿನೋದ್ ಕುಮಾರ್, ಆಹಾರ ಇಲಾಖೆಯ ಶಿರಸ್ತೇದಾರ್ ಸಣ್ಣಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.
ಸಾರ್ವಜನಿಕ ಆಸ್ಪತ್ರೆಗೆ ಭೇಟಿ: ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಲೋಕಾಯುಕ್ತ ಇನ್ಸ್‌ಪೆಕ್ಟರ್ ರೂಪಾಶ್ರೀ ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪೃಥ್ವಿ ಅವರಿಂದ ಮಾಹಿತಿ ಪಡೆದರು.
ಇತ್ತೀಚೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೊಳಗಾದ ರೋಗಿಗೆ ಚಿಕಿತ್ಸೆ ನೀಡಲು ರೋಗಿಯ ಸಂಬಂಧಿಕರನ್ನು ವೈದ್ಯರು ಚುಚ್ಚುಮದ್ದು ಖರೀದಿಗಾಗಿ ಖಾಸಗಿ ಮೆಡಿಕಲ್ ಸ್ಟೋರ್‌ಗೆ ಕಳುಹಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ರೂಪಾಶ್ರೀ, ಈ ವಿಷಯಕ್ಕೆ ಸಂಬಂಧಿಸಿದಂತೆ ಈವರೆಗೂ ಲೋಕಾಯುಕ್ತಕ್ಕೆ ಯಾವುದೇ ದೂರುಗಳು ಬಂದಿಲ್ಲ. ದೂರು ಬಂದಲ್ಲಿ ತನಿಖೆ ನಡೆಸಲಾಗುವುದು ಎಂದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪೃಥ್ವಿ ಅವರಿಂದ ಮಾಹಿತಿ ಪಡೆದರು. ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ಭ್ರಷ್ಟಾಚಾರ ವಿರುದ್ಧದ ಜಾಗೃತಿ ಪ್ರತಿಜ್ಞಾವಿಧಿ ಭೋದಿಸಲಾಯಿತು.
ತಜ್ಞ ವೈದ್ಯರಾದ ಡಾ.ಸಚ್ಚಿದಾನಂದ, ಡಾ.ಶಿವಪ್ರಕಾಶ್, ಡಾ.ಚಂದ್ರಾವತಿ, ಡಾ.ಪ್ರಮೋದ್, ಡಾ.ದಿವ್ಯಾಶ್ರೀ, ಸಿಬ್ಬಂದಿ ಜಯಂತಿ, ಗೀತಾ, ನಿಶಾಂತ್, ತ್ರಿವೇಣಿ, ಶಿವು ಮತ್ತಿತರಿದ್ದರು.