ನಾಳೆಯಿಂದ ಸರ್ಕಾರಿ ನೌಕರರ ಕ್ರೀಡಾಕೂಟ

sports
ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದ ಟ್ರಾೃಕ್ ಸೂಟ್, ಸ್ಮರಣಿಕೆಗಳನ್ನು ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅನಾವರಣಗೊಳಿಸಿದರು. ಆರ್.ಪಾಪಣ್ಣ, ರೇಖ್ಯಾ ನಾಯ್ಕ, ಸಿದ್ದಬಸಪ್ಪ, ಮಾರುತಿ ಇತರರಿದ್ದರು.
Published on

ಶಿವಮೊಗ್ಗ:ನಗರದಲ್ಲಿ ಮೇ 18ರಿಂದ 20ರವರೆಗೆ ನಡೆಯುವ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಭರದ ಸಿದ್ಧತೆ ನಡೆದಿದೆ. ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾರ್ ಮತ್ತಿತರರು ಕ್ರೀಡಾಪಟುಗಳ ಟ್ರಾೃಕ್ ಸೂಟ್ ಹಾಗೂ ಬಹುಮಾನವಾಗಿ ನೀಡಲಾಗುವ ಸ್ಮರಣಿಕೆಯನ್ನು ಶುಕ್ರವಾರ ಅನಾವರಣಗೊಳಿಸಿದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಎಸ್.ಷಡಾಕ್ಷರಿ, ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಆಗಮಿಸುವರು. 18ರಂದು ಸಂಜೆ 5.30ರ ಬದಲು 4 ಗಂಟೆಗೆ ಸಿಎಂ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಹೀಗಾಗಿ 3.45ರೊಳಗೆ ಎಲ್ಲ ಸರ್ಕಾರಿ ನೌಕರರು ಕ್ರೀಡಾಂಗಣದಲ್ಲಿ ಹಾಜರಿರಬೇಕು ಎಂದು ತಿಳಿಸಿದರು.

ಅತ್ಯಂತ ವ್ಯವಸ್ಥಿತವಾಗಿ ಕ್ರೀಡಾಕೂಟ ನಡೆಸಲು ಉದ್ದೇಶಿಸಿದ್ದೇವೆ. ಕ್ರೀಡಾಕೂಟ ಆರಂಭದ ವೇಳೆ ನೆಹರು ಕ್ರೀಡಾಂಗಣದಲ್ಲಿ ಧ್ವಜಾರೋಹಣ, ಬಲೂನ್ ಹಾರಿಬಿಡುವುದು, ಕ್ರೀಡಾಜ್ಯೋತಿ ಬೆಳಗಿಸುವುದು ಮುಂತಾದ ಕಾರ್ಯಕ್ರಮಗಳಿಗೆ ಸಿದ್ಧತೆ ನಡೆದಿದೆ. ತಂಡಗಳನ್ನು ರಚಿಸಿ ಎಲ್ಲರಿಗೂ ಜವಾಬ್ದಾರಿ ನೀಡಲಾಗಿದೆ. 5.30ಕ್ಕೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ ಎಂದರು.

ಕ್ರೀಡಾಕೂಟದಲ್ಲಿ ಭಾಗವಹಿಸಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ನೌಕರರಿಗೆ ವಸತಿ, ಊಟ, ಸಾರಿಗೆ ವ್ಯವಸ್ಥೆಯ ಸಿದ್ಧತೆಯೂ ಆಗಿದೆ. ಪ್ರತಿಯೊಬ್ಬ ನೌಕರರಿಗೂ ವಾಸ್ತವ್ಯ, ಭಾಗವಹಿಸುವ ಆಟ, ಕೋಚ್, ಸಾರಿಗೆ ವ್ಯವಸ್ಥೆಯ ಸಂಪೂರ್ಣ ವಿವರಗಳು ಅವರ ಮೊಬೈಲ್‌ನಲ್ಲೇ ಲಭ್ಯವಾಗುವ ಹಾಗೆ ಕ್ಯೂಆರ್ ಕೋಡ್ ವ್ಯವಸ್ಥೆ ಮಾಡಲಾಗಿದೆ. ತಮ್ಮ ಹೆಸರಿನ ಮುಂದಿನ ಕ್ಯೂಆರ್ ಕೋಡ್ ಸ್ಕಾೃನ್ ಮಾಡಿದರೆ ಎಲ್ಲ ವಿವರ ತಿಳಿಯಲಿದೆ ಎಂದು ಹೇಳಿದರು.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾ ನಾಯ್ಕ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಪಾಪಣ್ಣ, ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ದಬಸಪ್ಪ, ಪದಾಧಿಕಾರಿಗಳಾದ ದಿನೇಶ್, ಸತೀಶ್, ಮಾರುತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net