ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವಿರೋಧ

School bund
Published on

ಬೆಂಗಳೂರು ಶಾಲಾ ಶಿಕ್ಷಣ ಇಲಾಖೆಯು ರಾಜ್ಯದ ಸರ್ಕಾರಿ ಶಾಲೆಗಳನ್ನು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವವಾಗಿ (ಪಿಪಿಪಿ) ಮಾರ್ಪಡಿಸಲು ಹೊರಟಿರುವುದಕ್ಕೆ ಪಾಲಕರು, ಶಿಕ್ಷಣ ತಜ್ಞರು ಮತ್ತು ವಿವಿಧ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ.

ಸದ್ಯ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟವಿಲ್ಲವೆಂದು ಹೇಳುವ ಸರ್ಕಾರ ಶಿಕ್ಷಕರ ನೇಮಕಾತಿ ಮತ್ತು ಸೌಲಭ್ಯ ಕಲ್ಪಿಸುವ ಕಡೆ ಗಮನ ಹರಿಸಬೇಕೇ ವಿನಾ ಖಾಸಗಿಯವರನ್ನು ತಂದು ಸರ್ಕಾರಿ ಶಾಲೆಗಳಲ್ಲಿ ಕೂರಿಸುವುದಲ್ಲ. ಇದರಿಂದ ಭವಿಷ್ಯದಲ್ಲಿ ಸರ್ಕಾರಿ ಶಾಲೆಗಳಿಗೆ ಮಾರಕವಾಗಲಿದೆ. ಸರ್ಕಾರಿ ಶಾಲೆಗಳು ಖಾಸಗಿಯವರ ಕೈಗೊಂಬೆಯಾಗುವ ಎಲ್ಲ ದಾರಿಗಳನ್ನು ಸರ್ಕಾರ ಮಾಡಿಕೊಡುತ್ತಿದೆ. ಶಿಕ್ಷಕರನ್ನು ಖಾಸಗಿ ಶಾಲೆಗಳೇ ನೇಮಿಸಿದರೆ, ಈಗ ನೀಡುತ್ತಿರುವ ಸಿಎಸ್‌ಆರ್ ನಿಧಿ ಕೂಡ ಸ್ಥಗಿತಗೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಹಿಂದಿನ ಅವಧಿ ಮಾದರಿಯನ್ನೇ ಜಾರಿಗೊಳಿಸಿ:

ರಾಜ್ಯದ ಶೈಕ್ಷಣಿಕ ಸಮಸ್ಯೆಗಳು ಹೊದೇನಲ್ಲ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಿದ್ದರಾಮಯ್ಯ ಸರ್ಕಾರ ಹಿಂದಿನ ಅವಧಿಯಲ್ಲಿ ಮಾದರಿ ಶಾಲೆ ಯೋಜನೆ ಆರಂಭಿಸಿತ್ತು. ಸಿಎಸ್‌ಆರ್ ಹಾಗೂ ಸರ್ಕಾರದ ಅನುದಾನದ ಮೂಲಕ ಇಂತಹ ಶಾಲೆಗಳನ್ನು ಮಾಡಬಹುದು. ಉಳಿದ ಶಾಲೆಗಳನ್ನು ಮುಚ್ಚಿ ಒಂದೇ ಮಾದರಿ ಶಾಲೆಗೆ ಎಲ್ಲ ವಿದ್ಯಾರ್ಥಿಗಳನ್ನು ಬಸ್‌ನಲ್ಲಿ ಕರೆ ತರುವ ಯೋಜನೆ ಕೂಡ ರೂಪಿಸಿತ್ತು. ಒಂದಂಕಿ ಮಕ್ಕಳಿರುವ ಶಾಲೆ ನಡೆಸುವುದಕ್ಕಿಂತ ಕಡಿಮೆ ಖರ್ಚಿನಲ್ಲಿ ಮಾದರಿ ಶಾಲೆಗಳನ್ನು ನಡೆಸಬಹುದು ಎಂದು ಸರ್ಕಾರವೇ ಹೇಳಿತ್ತು. ಆದರೆ, ಪಿಪಿಪಿ ಮಾದರಿ ಮಾತ್ರ ಬೇಡವೆಂದು ವಿರೋಧ ವ್ಯಕ್ತಪಡಿಸಿದ್ದಾರೆ.

ತೆರಿಗೆ ಹಣದಿಂದ ಶಾಲೆಗಳನ್ನು ನಡೆಸಿ: ಎಐಡಿಎಸ್‌ಒ

ಕಾರ್ಪೋರೇಟ್ ದಾನಗಳ ಮೇಲೆ ಅವಲಂಬಿತವಾಗಿ ಸರ್ಕಾರಿ ಶಾಲೆಗಳಿಗೆ ಹಣಕಾಸು ನೀಡುವ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಸರ್ಕಾರದ ಈ ಧೋರಣೆಯನ್ನು ಎಐಡಿಎಸ್‌ಒ ಸಂಘಟನೆಯು ಖಂಡಿಸಿದೆ.

ದೇಶದ ಮಕ್ಕಳಿಗೆ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಶಿಕ್ಷಣಕ್ಕೆ ಹಣಕಾಸು ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಶಾಲೆಗಳ ದುರಸ್ತಿಗೆ ಹಣ ಬೇಕು ನಿಜ. ಆದರೆ, ಕಾರ್ಪೋರೇಟ್ ಕಂಪನಿಗಳು ಕೊಡುವ ದಾನದ ಹಣವಲ್ಲ. ಈ ರಾಜ್ಯದ ಜನಸಾಮಾನ್ಯರು ಕಟ್ಟುವ ತೆರಿಗೆ ಹಣದಿಂದ ಸರ್ಕಾರಿ ಶಾಲೆಗಳ ನಿರ್ವಹಣೆ ನಡೆಯಬೇಕು. ಸರ್ಕಾರಿ ಶಾಲೆಗಳಿಗೆ ಹಣ ನೀಡಿ ಹಕ್ಕು ಸಾಧಿಸುವ ಕನಿಷ್ಠ ಅವಕಾಶವನ್ನು ಕೂಡ ಸರ್ಕಾರ ನೀಡಬಾರದು ಎಂದು ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಆಗ್ರಹಿಸಿದ್ದಾರೆ.

ಸಿಎಂ ಮಧ್ಯಸ್ಥಿಕೆ ವಹಿಸಿ ಯೋಜನೆ ಕೈಬಿಡಿ: ನಿರಂಜನಾರಾಧ್ಯ

ಸರ್ಕಾರಿ ಶಾಳೆಗಳನ್ನು ಖಾಸಗಿ ಶಾಲೆಗಳು ಏಕೆ ದತ್ತು ತೆಗೆದುಕೊಳ್ಳಬೇಕು? ಗುಣಮಟ್ಟದ ಶಿಕ್ಷಣ ನೀಡಲು ಖಾಸಗಿ ಶಾಲೆಗಳ ಅರ್ಹತೆ ಮತ್ತು ಸಾಮರ್ಥ್ಯಗಳೇನು ಎಂದು ಶಿಕ್ಷಣ ತಜ್ಞ ಡಾ. ವಿ.ಪಿ. ನಿರಂಜನಾರಾಧ್ಯ ಪ್ರಶ್ನಿಸಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಆರ್‌ಟಿಇ ಕಾಯ್ದೆ ಕಲಂ 23ರ ಪ್ರಕಾರ, ಸಮರ್ಥ ಮತ್ತು ಅರ್ಹ ಶಿಕ್ಷಕರನ್ನು ಪಡೆಯಲು ಟಿಇಟಿ ಪ್ರಕ್ರಿಯೆ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ. ಆದರೆ, ಖಾಸಗಿ ಶಾಲೆಗಳು ಅರ್ಹತೆಗಳಿಲ್ಲದ ಶಿಕ್ಷಕರನ್ನು ಕೂಡ ನೇಮಕ ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ಖಾಸಗಿ ಶಾಲೆಗಳಲ್ಲಿ ಕಡಿಮೆ ವೇತನ ನೀಡಿ ಶೋಷಣೆ ಮಾಡಲಾಗುತ್ತಿದೆ.

ಖಾಸಗಿ ಶಾಲೆಗಳ ಬಾಗಿಲಿಗೆ ಸರ್ಕಾರಿ ಶಾಲೆ ಮಕ್ಕಳನ್ನು ಭಿಕ್ಷಾ ಪಾತ್ರೆಯೊಂದಿಗೆ ತಳ್ಳುತ್ತಿದೆ. ಮುಖ್ಯಮಂತ್ರಿಗಳು ಮಧ್ಯಸ್ಥಿಕೆ ವಹಿಸಿ ಈ ಸಂವಿಧಾನ ವಿರೋಧಿ ಯೋಜನೆಯನ್ನು ಕೈ ಬಿಡುವಂತೆ ಸಚಿವರಿಗೆ ಸಲಹೆ ನೀಡಬೇಕು. - ಡಾ. ವಿ.ಪಿ. ನಿರಂಜನಾರಾಧ್ಯ, ಶಿಕ್ಷಣ ತಜ್ಞ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net