ಸರ್ಕಾರಿ ಡಿಗ್ರಿ ಕಾಲೇಜುಗಳು ಹೌಸ್​ಫುಲ್!; ಸಂಕಷ್ಟ ತಂದ ಕರೊನಾ 50 ಸಾವಿರ ವಿದ್ಯಾರ್ಥಿಗಳ ಹೆಚ್ಚುವರಿ ಪ್ರವೇಶ

Front 3
Published on

ಬೆಂಗಳೂರು: ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ಬಿಸಿ, ಕರೊನಾದಿಂದ ಪಾಲಕರಿಗೆ ಎದುರಾಗಿರುವ ಆರ್ಥಿಕ ಸಂಕಷ್ಟದ ಪರಿಣಾಮ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಪ್ರಮಾಣ ಹೆಚ್ಚಿದ್ದು, ಬಹುತೇಕ ಸೀಟುಗಳು ಭರ್ತಿಯಾಗಿವೆ. ರಾಜ್ಯದಲ್ಲಿರುವ 430 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಈ ವರ್ಷ ಪ್ರವೇಶ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಬರೋಬ್ಬರಿ 50 ಸಾವಿರ ಹೆಚ್ಚಳವಾಗಿದೆ. ಮತ್ತಷ್ಟು ಕಾಲೇಜುಗಳಲ್ಲಿ ಅಗತ್ಯಕ್ಕಿಂತ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಿ, ಈ ಮೊದಲು ಪಡೆದಿದ್ದ ಇನ್​ಟೇಕ್ ಪ್ರಮಾಣವನ್ನು ಹೆಚ್ಚಳ ಮಾಡಲು ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. 430 ಸರ್ಕಾರಿ ಕಾಲೇಜುಗಳಲ್ಲಿ ಪದವಿ ಕೋರ್ಸ್​ಗಳಿಗೆ ಇರುವ 2 ಲಕ್ಷ ಸೀಟುಗಳಲ್ಲಿ 85 ಸಾವಿರ ಖಾಲಿ ಉಳಿಯುತ್ತಿದ್ದವು. ಆದರೆ, ಈ ಬಾರಿ 1.65 ಲಕ್ಷ ಸೀಟು ಭರ್ತಿಯಾಗಿವೆ. ಇನ್ನೂ ಲ್ಯಾಟರಲ್ ಎಂಟ್ರಿ ಮೂಲಕವೂ ವಿದ್ಯಾರ್ಥಿಗಳ ಪ್ರವೇಶ ಪಡೆದುಕೊಳ್ಳಬೇಕಿದ್ದು, ಆ ಎಲ್ಲ ವಿದ್ಯಾರ್ಥಿಗಳು ಡಿಪ್ಲೊಮಾ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

ಎಲ್ಲರೂ ಪಾಸ್ ಎಫೆಕ್ಟ್: ಕರೊನಾ ಹಿನ್ನೆಲೆಯಲ್ಲಿ ಪರೀಕ್ಷೆ ಇಲ್ಲದೆ ನೇರವಾಗಿ ಪಾಸ್ ಮಾಡಿದ್ದೇ ವಿದ್ಯಾರ್ಥಿಗಳ ಪ್ರವೇಶ ಹೆಚ್ಚಳಕ್ಕೆ ಕಾರಣ ಎಂದು ಅಂದಾಜಿಸಲಾಗಿದೆ. 2021ರಲ್ಲಿ ದ್ವಿತೀಯ ಪಿಯುಗೆ ನೋಂದಾಯಿಸಿಕೊಂಡಿದ್ದ 6.66 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಪ್ರತಿ ವರ್ಷ ಕನಿಷ್ಠ 2 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದರು. ಪಾಲಕರು ಖಾಸಗಿ ಶಾಲೆಗಳ ಶುಲ್ಕ ಪಾವತಿಸುವಷ್ಟು ಸಶಕ್ತರಾಗಿಲ್ಲದಿರುವುದು ಮತ್ತೊಂದು ಕಾರಣ.

ವಾಣಿಜ್ಯ ಕೋರ್ಸ್​ಗೆ ಹೆಚ್ಚಿದ ಒಲವು: ನಿಕಾಯವಾರು ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳ ಪ್ರಮಾಣ ನೋಡಿದಾಗ ಶೇ.60 ವಿದ್ಯಾರ್ಥಿಗಳು ವಾಣಿಜ್ಯ ಕೋರ್ಸ್​ಗೆ ಪ್ರವೇಶ ಪಡೆಯುತ್ತಿದ್ದಾರೆ. ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ವಾಣಿಜ್ಯ ಕೋರ್ಸ್​ಗೆ ಮತ್ತು ಉತ್ತರ ಕರ್ನಾಟಕದಲ್ಲಿ ಕಲಾ ನಿಕಾಯಕ್ಕೆ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಆದರೆ, ಇನ್ನೂ ಅಂಕಿ-ಅಂಶಗಳನ್ನು ನಿಖರವಾಗಿ ತಿಳಿಸಲು ಸಾಧ್ಯವಾಗುತ್ತಿಲ್ಲವೆಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

14 ಸಾವಿರ ಅತಿಥಿ ಉಪನ್ಯಾಸಕರ ನೇಮಕ: ರಾಜ್ಯದ 430 ಕಾಲೇಜುಗಳಲ್ಲಿರುವ ಉಪನ್ಯಾಸಕರ ಕೊರತೆ ನೀಗಿಸಲು 14 ಸಾವಿರ ಅತಿಥಿ ಉಪನ್ಯಾಸಕರ ನೇಮಕಕ್ಕೆ ಸರ್ಕಾರ ಆದೇಶಿಸಿದೆ. ಇದರಿಂದ ನಿಗದಿತ ವೇಳಾಪಟ್ಟಿ ಪ್ರಕಾರವಾಗಿ ವಿದ್ಯಾರ್ಥಿಗಳಿಗೆ ಬೋಧನೆ ನಡೆಯಲಿದೆ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿಗಳ ಪ್ರವೇಶ ಹೆಚ್ಚಾದ ಹಿನ್ನೆಲೆಯಲ್ಲಿ ಲಭ್ಯವಿರುವ ಮೂಲಸೌಕರ್ಯಗಳ ಅನುಗುಣವಾಗಿ ಪಾಳಿ ವ್ಯವಸ್ಥೆಯಲ್ಲಿ ತರಗತಿಗಳನ್ನು ನಡೆಸುತ್ತಿದ್ದೇವೆ.

| ಡಾ.ಪಿ.ಪ್ರದೀಪ್ ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net