

ಸಾಗರ: ನಾಟಕಗಳು ಮನರಂಜನೆಗೆ ಮಾತ್ರವಲ್ಲದೆ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವಂತಿರಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು
ಸಾಗರ ತಾಲೂಕಿನ ಹೆಗ್ಗೋಡು ನೀನಾಸಂ ಆವರಣದಲ್ಲಿ ಭಾನುವಾರ ನವೀಕೃತ ರಂಗ ಸಭಾಂಗಣ, ವರ್ಷಾಂತ್ಯದ ನಾಟಕೋತ್ಸವ ಹಾಗೂ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಅರಿವಿನ ಮಾರ್ಗದತ್ತ ಪ್ರೇಕ್ಷಕರನ್ನು ರಂಗ ಪ್ರದರ್ಶನ ಕರೆದೊಯ್ಯುತ್ತದೆ. ನಾಟಕಗಳು ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಪ್ರದರ್ಶನವಾಗುತ್ತಿವೆ. ದೊಡ್ಡದೊಡ್ಡ ನಗರಗಳು ಮಾಲ್ ಸಂಸ್ಕೃತಿಗೆ ಒಗ್ಗಿಕೊಳ್ಳುತ್ತಿವೆ. ನೀನಾಸಂನಲ್ಲಿ ರಾಜ್ಯದ ಬೇರೆಬೇರೆ ಭಾಗಗಳಿಂದ ಯುವಜನರು ರಂಗ ಶಿಕ್ಷಣ ಪಡೆಯಲು ಬರುತ್ತಿರುವುದು ಅತ್ಯಂತ ಸಂತಸದ ಸಂಗತಿ ಎಂದರು.
ನೀನಾಸಂ ಕಳೆದ 75 ವರ್ಷಗಳಿಂದ ರಂಗ ಸಂಸ್ಕೃತಿಯನ್ನು ಮುನ್ನಡೆಸಿಕೊಂಡು ಬರುತ್ತಿದೆ. ನೀನಾಸಂನಲ್ಲಿ ಅತ್ಯುತ್ತಮವಾಗಿ ತರಬೇತಿ ನೀಡುತ್ತಿದ್ದು, ಅನೇಕ ಕಲಾವಿದರು ಇಂದು ಉತ್ತಮ ಹೆಸರು ಗಳಿಸಿದ್ದಾರೆ. ಸರ್ಕಾರದಿಂದ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತದೆ. ಇಂತಹ ಪ್ರದೇಶಗಳಿಗೆ ಬಂದು ಸುಳ್ಳು ಭರವಸೆ ಕೊಡಲು ಬರುವುದಿಲ್ಲ. ಸಾಹಿತಿಗಳು, ಬರಹಗಾರರು, ಕಲಾವಿದರು, ಪತ್ರಕರ್ತರ ಎದುರು ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನುಡಿದಂತೆ ನಡೆಯುತ್ತೇವೆ. ಕನ್ನಡ ಉಳಿಸಿ ಬೆಳೆಸುವ, ಕಲೆ, ಸಂಸ್ಕೃತಿಯನ್ನು ಮುನ್ನಡೆಸಿಕೊಂಡು ಹೋಗುವ ಚಟುವಟಿಕೆಗಳಿಗೆ ಇಲಾಖೆ ಹೆಚ್ಚಿನ ಸಹಕಾರ ನೀಡುತ್ತದೆ ಎಂದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ನೀನಾಸಂಗೆ 75 ವರ್ಷ ದಾಟಿದೆ. ರಾಜ್ಯದ ಗಮನ ಸೆಳೆದ ನೀನಾಸಂನಲ್ಲಿ ನಡೆಯುತ್ತಿರುವ ರಂಗ ಚಟುವಟಿಕೆ ಬೆಳೆಸಲು ಸರ್ಕಾರದಿಂದ ಹೆಚ್ಚಿನ ಆರ್ಥಿಕ ಸಹಕಾರ ಕೊಡಿಸಲಾಗುತ್ತದೆ. ನಿವೃತ್ತಿ ನಂತರ ಕಲಾವಿದರ ಬದುಕು ತೀರ ಕಷ್ಟದಲ್ಲಿರುತ್ತದೆ. ಸರ್ಕಾರ ಕಲಾವಿದರ ಮಾಸಾಶನ ಹೆಚ್ಚಿಸಲು ಗಮನ ಹರಿಸಬೇಕು. ಸಾಗರದಲ್ಲಿ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಟ್ಯಾಗೋರ್ ಕಲ್ಚರಲ್ ಕಾಂಪ್ಲೆಕ್ಸ್ ನಿರ್ಮಿಸುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್, ನೀನಾಸಂ ಅಧ್ಯಕ್ಷ ಸಿದ್ದಾರ್ಥ ಭಟ್, ಕೆ.ವಿ.ಅಕ್ಷರ, ಮಾಧವ ಚಿಪ್ಳಿ ಇತರರಿದ್ದರು.