

ಆನಂದಪುರ: ಇರುವಕ್ಕಿ ಗ್ರಾಮದ ನಾಮಲಕ ಹೊತ್ತ ಬಸ್ ಹಳ್ಳಿಯ ಪ್ರಮುಖ ವೃತ್ತಕ್ಕೆ ಬರಲು ಆರಂಭಿಸಿದೆ. ‘ಬೋರ್ಡ್‌ನಲ್ಲಿ ಇರುವ ಊರಿನ ನಿಲ್ದಾಣಕ್ಕೇ ಬರುತ್ತಿಲ್ಲ ಬಸ್’ ಎಂಬ ಶೀರ್ಷಿಕೆಯಡಿ ವಿಜಯವಾಣಿ ಸೆ.14ರ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಅಧಿಕಾರಿಗಳು ಇದಕ್ಕೆ ಸ್ಪಂದಿಸಿರುವ ಕಾರಣ ಬಸ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಎದುರಿನ ವೃತ್ತದವರೆಗೆ ಬಂದು ಹೋಗುತ್ತಿದೆ. ಶಿವಮೊಗ್ಗ ಬಸ್ ನಿಲ್ದಾಣದಿಂದ ಬೆಳಗ್ಗೆ 8ಕ್ಕೆ ಹೊರಡುವ ಬಸ್ 9.25ಕ್ಕೆ ಇರುವಕ್ಕಿ ಗ್ರಾಮವನ್ನು ತಲುಪಿದೆ. ಕಳೆದ ವಾರ ನೂತನವಾಗಿ ಆರಂಭಗೊಂಡ ಈ ಬಸ್ ಬಸವನಹೊಂಡದ ಬಳಿ ಇರುವ ಕೃಷಿ ಮತ್ತು ತೋಟಗಾರಿಕೆ ವಿವಿ ಆವರಣದವರೆಗೆ ಮಾತ್ರ ಬಂದು ಹೋಗುತ್ತಿತ್ತು. ಈ ಬಗ್ಗೆ ಇರುವಕ್ಕಿ ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ವರದಿ ಮಾಡಿದ ನಂತರ ಗ್ರಾಮಕ್ಕೆ ಬಸ್ ಬರುತ್ತಿರುವುದರಿಂದ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ವಿಜಯವಾಣಿ ಪತ್ರಿಕೆಯ ಕಳಕಳಿಗೆ ಯಡೇಹಳ್ಳಿ ಗ್ರಾಪಂ ಸದಸ್ಯ ಅರುಣ ಗೌಡ, ಸಮಾಜ ಸೇವಕ ಲೋಕೇಶ ಹಾಗೂ ಅಪ್ಪು ಸೇನೆ ಜಿಲ್ಲಾಧ್ಯಕ್ಷ ಗುರುಪ್ರಸಾದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.