ಎಸ್ಕಾಂಗಳಿಗೆ ಸರ್ಕಾರಿ ಸಂಸ್ಥೆಗಳೇ ಆರ್ಥಿಕ ಭಾರ: 12,463 ಕೋಟಿ ವಿದ್ಯುತ್ ಬಿಲ್ ಬಾಕಿ- electricity bill arrears.

ಎಲ್ಲ ಇಲಾಖೆಗಳಕ್ಕಿಂತ ಗ್ರಾಮೀಣಾಭಿವೃದ್ಧಿ ಇಲಾಖೆಯೇ(ಆರ್‌ಡಿಪಿಆರ್) ಅತಿ ಹೆಚ್ಚು ಅಂದರೆ 5,626 ಕೋಟಿ ರೂ, ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಪ್ರಮುಖವಾಗಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಬೀದಿ ದೀಪಗಳು ಮತ್ತು ಕುಡಿಯುವ ನೀರಿನ ಪಂಪ್‌ಸೆಟ್‌ಗಳ ಬಿಲ್ ಇದರಲ್ಲಿ ಸೇರಿದೆ
ವಿದ್ಯುತ್​ ಬಿಲ್​​ ಬಾಕಿ
ಎಸ್ಕಾಂಗಳು
Published on: 

ಹರೀಶ್ ಬೇಲೂರು ಬೆಂಗಳೂರು

(12,463 crore in electricity bill arrears) ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಿಗೆ (ಎಸ್ಕಾಂಗಳು) ನಗರಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿ ವಿವಿಧ ಸ್ಥಳೀಯ ಸಂಸ್ಥೆಗಳಿಂದ ಬರೋಬ್ಬರಿ 12,463 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ.

ಎಲ್ಲ ಇಲಾಖೆಗಳಕ್ಕಿಂತ ಗ್ರಾಮೀಣಾಭಿವೃದ್ಧಿ ಇಲಾಖೆಯೇ(ಆರ್‌ಡಿಪಿಆರ್) ಅತಿ ಹೆಚ್ಚು ಅಂದರೆ 5,626 ಕೋಟಿ ರೂ, ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಪ್ರಮುಖವಾಗಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಬೀದಿ ದೀಪಗಳು ಮತ್ತು ಕುಡಿಯುವ ನೀರಿನ ಪಂಪ್‌ಸೆಟ್‌ಗಳ ಬಿಲ್ ಇದರಲ್ಲಿ ಸೇರಿದೆ. ಜಿಬಿಎ, ವಿವಿಧ ಮಹಾನಗರ ಪಾಲಿಕೆಗಳು ಮತ್ತು ಪುರಸಭೆಗಳ ಒಳಗೊಂಡ ನಗರಾಭಿವೃದ್ಧಿ ಇಲಾಖೆ, 3,923 ಕೋಟಿ ರೂ.ಬಾಕಿ ಉಳಿಸಿಕೊಂಡಿದೆ. ತಹಸೀಲ್ದಾರ್ ಕಚೇರಿಗಳು, ಉಪವಿಭಾಗಾಧಿಕಾರಿ(ಎಸಿ) ಕಚೇರಿಗಳು ಸೇರಿ ಉಳಿದ ಸರ್ಕಾರಿ ಇಲಾಖೆಗಳು 2,914 ಕೋಟಿ ರೂ.ವಿದ್ಯುತ್ ಶುಲ್ಕ ಕಟ್ಟಿಲ್ಲ.

ಇತ್ತೀಚಿನ ದಿನಗಳಲ್ಲಿ ಬಿಲ್ ಪಾವತಿಸದ ರಾಜ್ಯದ ಕೆಲವು ತಹಸೀಲ್ದಾರ್ ಕಚೇರಿಗಳು, ಎಸಿ ಕಚೇರಿಗಳು ಮತ್ತು ಶಾಸಕರ ಕಚೇರಿಗಳ ವಿದ್ಯುತ್ ಸಂಪರ್ಕವನ್ನು ಎಸ್ಕಾಂಗಳು ಮುಲಾಜಿಲ್ಲದೆ ಕಡಿತಗೊಳಿಸುತ್ತಿವೆ. ವಿದ್ಯುತ್ ಕಡಿತದಿಂದ ಸರ್ಕಾರಿ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಬಾಕಿ ವಿದ್ಯುತ್ ಬಿಲ್‌ಗಳಿಂದ ಎಸ್ಕಾಂಗಳು, ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಹಣ ಪಾವತಿಸಲು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಬಿಲ್ ಪಾವತಿಸಲು ತುಸು ತಡವಾದರೂ ಮನೆಗಳ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸುವ ವಿದ್ಯುತ್ ಸರಬರಾಜು ಕಂಪನಿಗಳು, ಬಾಕಿ ಬಿಲ್ ಉಳಿಸಿಕೊಂಡಿರುವ ಸ್ಥಳೀಯ ಸಂಸ್ಥೆಗಳಿಂದ ಹಣ ವಸೂಲಿಗೆ ಹೆಣಗಾಡುತ್ತಿವೆ. ಪ್ರತಿ ಬಾರಿ ತ್ರೈಮಾಸಿಕ ಸಭೆ ನಡೆಸುವ ಸಂದರ್ಭದಲ್ಲಿ ಇಂಧನ ಇಲಾಖೆ, ವಿದ್ಯುತ್ ಬಿಲ್ ಪಾವತಿಸುವಂತೆ ನಿರಂತರವಾಗಿ ಪತ್ರ ವ್ಯವಹಾರ ನಡೆಸುತ್ತಿದ್ದರೂ ಪ್ರಯೋಜನವಾಗಿಲ್ಲ.

ಗ್ರಾಹಕರಿಗೆ ಹೊರೆ

ಸರ್ಕಾರಿ ಸಂಸ್ಥೆಗಳು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಳ್ಳುವುದು, ಎಸ್ಕಾಂಗಳಿಗೆ ಮತ್ತು ರಾಜ್ಯದ ಒಟ್ಟಾರೆ ಆರ್ಥಿಕತೆಗೆ ದೊಡ್ಡ ಹೊರೆಯಾಗಿದೆ. ವಿದ್ಯುತ್ ಖರೀದಿ ಮಾಡಿದ ಎಸ್ಕಾಂಗಳು, ವಿದ್ಯುತ್ ಉತ್ಪಾದಿಸುವ ಕಂಪನಿಗಳಿಗೆ (ಗಡುವು ಮೀರಿದ ಮುನ್ನವೇ) ಹಣ ಪಾವತಿಸಬೇಕಿರುತ್ತದೆ. ಆದರೆ, ಸರ್ಕಾರಿ ಇಲಾಖೆಗಳಿಂದ ಸಕಾಲಕ್ಕೆ ಹಣ ಬರದಿದ್ದಾಗ ಎಸ್ಕಾಂಗಳು ಸಾಲದ ಸುಳಿಗೆ ಸಿಲುಕಿವೆ. ಎಸ್ಕಾಂಗಳ ನಷ್ಟವನ್ನು ಸರಿದೂಗಿಸಲು ಮತ್ತು ಕಾರ್ಯನಿರ್ವಹಣಾ ವೆಚ್ಚವನ್ನು ನಿಭಾಯಿಸಲು ಅಗಾಗ್ಗೆ ವಿದ್ಯುತ್ ದರ ಪರಿಷ್ಕರಣೆ ಮಾಡುತ್ತಾ ಬರಲಾಗುತ್ತಿದೆ. ಇದರಿಂದ ಪ್ರಾಮಾಣಿಕವಾಗಿ ಬಿಲ್ ಪಾವತಿಸುವ ಸಾಮಾನ್ಯ ಗ್ರಾಹಕರಿಗೆ ಹೊರೆಯಾಗುತ್ತದೆ. ಆರ್ಥಿಕ ಕೊರತೆಯಿಂದ ವಿದ್ಯುತ್ ಜಾಲದ ಆಧುನೀಕರಣ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಗುಣಮಟ್ಟದ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಗಳು ಉಂಟಾಗುತ್ತಿದೆ. ಹಾಗಾಗಿ, ಬಜೆಟ್‌ನಲ್ಲಿ ವಿದ್ಯುತ್ ಬಿಲ್‌ಗಾಗಿ ಪ್ರತ್ಯೇಕ ಅನುದಾನ ಮೀಸಲಿಡಬೇಕು. ಬಾಕಿ ಉಳಿಸಿಕೊಳ್ಳುವ ಸರ್ಕಾರಿ ಕಚೇರಿಗಳಿಗೂ ಕಡ್ಡಾಯವಾಗಿ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಸಬೇಕು.

Also Read
ಬರದಲ್ಲೂ ಸರ್ಕಾರದ ಬೊಕ್ಕಸಕ್ಕೆ ಅಬಕಾರಿ ಕಿಕ್: 3 ತಿಂಗಳಲ್ಲಿ 11,595 ಕೋಟಿ ಆದಾಯ- Excise revenue boost
ವಿದ್ಯುತ್​ ಬಿಲ್​​ ಬಾಕಿ

42,750 ಕೋಟಿ ರೂ.ಮೀರಿದ ಎಸ್ಕಾಂ ಸಾಲ

2026ರ ಜನವರಿ ಅಂತ್ಯದವರೆಗೆ ವಿದ್ಯುತ್ ಸರಬರಾಜು ಕಂಪನಿಗಳು, ಒಟ್ಟು 42,750 ಕೋಟಿ ರೂ.ಸಾಲ ಪಡೆದಿವೆ. ಪ್ರತಿ ವರ್ಷ ಸರ್ಕಾರದಿಂದ ಸಹಾಯಧನ ಬಿಡುಗಡೆಯಾಗುತ್ತಿದ್ದರೂ ಹೆಚ್ಚುವರಿ ವಿದ್ಯುತ್ ಬೇಡಿಕೆ ಅನುಗುಣವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯವಾದ ಬಂಡವಾಳ ವೆಚ್ಚಕ್ಕಾಗಿ ವಿದ್ಯುತ್ ಸರಬರಾಜು ಕಂಪನಿಗಳು, ವಿವಿಧ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುತ್ತಿವೆ. 2026ರ ೆಬ್ರವರಿ ಅಂತ್ಯಕ್ಕೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ(ಬೆಸ್ಕಾಂ) ದೀರ್ಘಾವಧಿ ಸಾಲವು 17,556 ಕೋಟಿ ರೂ. ಇರುತ್ತದೆ. ಕರ್ನಾಟಕ ವಿದ್ಯುತ್ ನಿಗಮ ನಿಯಮಿತಕ್ಕೆ(ಕೆಪಿಸಿಎಲ್), ಎಸ್ಕಾಂಗಳು ಪಾವತಿಸಬೇಕಾದ ಬಾಕಿ ಮೊತ್ತವು ಲೇಟ್‌ಪೇಮೆಂಟ್ ಸಚಾರ್ಜ್(ಎಲ್‌ಪಿಎಸ್) 5,277 ಕೋಟಿ ರೂ.ಸೇರಿ 8,755 ಕೋಟಿ ರೂ.ಆಗಿದೆ. ವಿದ್ಯುತ್ ಖರೀದಿ ಮೊತ್ತವು ಅನಿಯಂತ್ರಿತ ವೆಚ್ಚವಾಗಿದ್ದು, ಪ್ರತಿ ವರ್ಷ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿರುವಂತೆ ವಿದ್ಯುತ್ ಖರೀದಿ ಮೊತ್ತವು ಹೆಚ್ಚಾಗುತ್ತಿದೆ.

ವಿದ್ಯುತ್ ಬಾಕಿ ಮೊತ್ತದ ವಿವರ

ಇಲಾಖೆ ಹೆಸರು ಬೆಸ್ಕಾಂ ಸೆಸ್ಕ್ ಮೆಸ್ಕಾಂ ಹೆಸ್ಕಾಂ ಜೆಸ್ಕಾಂ( ಕೋಟಿ ರೂ.ಗಳಲ್ಲಿ)

ನಗರಾಭಿವೃದ್ಧಿ 3404 64 23 194 236

ಗ್ರಾಮೀಣಾಭಿವೃದ್ಧಿ 2364 563 237 797 1663

ಇತರೆ ಸರ್ಕಾರಿ ಸಂಸ್ಥೆಗಳು442 605 506 1057 301

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net