

ಅರಕಲಗೂಡು: ಪಟ್ಟಣದಲ್ಲಿ ನನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ಶಾಸಕ ಎ.ಮಂಜು ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದ ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಮಂಗಳವಾರ ಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಕಳೆದ 8ವರ್ಷಗಳಿಂದ ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳ್ಳದೆ ನನೆಗುದಿಗೆ ಬಿದ್ದಿತ್ತು. ಬಾಕಿ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಕಳೆದ ವಿಧಾನಸಭಾ ಅಧಿವೇಶನದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರ ಗಮನ ಸೆಳೆಯಲಾಗಿತ್ತು. ಕೂಡಲೇ ಸಚಿವರು 1.50 ಕೋಟಿ ರೂ. ಬಿಡುಗಡೆ ಮಾಡಿದ್ದು, 6 ತಿಂಗಳೊಳಗೆ ಬಾಕಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ವೇಳೆ 3.50 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದೆ. ಆರಂಭಿಕವಾಗಿ 1.50 ಕೋಟಿ ರೂ. ಬಿಡುಗಡೆಯಾಗಿತ್ತು. ಈಗ ನಾನೇ ಶಾಸಕನಾಗಿರುವ ಅವಧಿಯಲ್ಲಿ ಭವನದ ಕಾಮಗಾರಿ ಪೂರ್ಣಗೊಳಿಸುವ ಅವಕಾಶ ಸಿಕ್ಕಿದೆ. ಇನ್ನೂ ಯಾವುದೇ ಕಾರಣಕ್ಕೂ ಭವನದ ಕೆಲಸ ನನೆಗುದಿಗೆ ಬೀಳುವುದಿಲ್ಲ. ಬಿಡುಗಡೆಯಾಗಿರುವ ಹಣದಲ್ಲಿ ಕೆಲಸ ಪೂರ್ಣಗೊಳ್ಳದಿದ್ದರೆ ಮತ್ತೆ ಅನುದಾನ ತಂದು ಸಂಪೂರ್ಣವಾಗಿ ಕೆಲಸ ಪೂರ್ಣಗೊಳಿಸಿ ಉದ್ಘಾಟಿಸಲಾಗುವುದು ಎಂದು ಭರವಸೆ ನೀಡಿದರು.
2017ರ ಡಿ.11ರಂದು ಅಂಬೇಡ್ಕರ್ ಅವರ ಪರಿನಿಬ್ಬಾಣದಿನ ಕಾರ್ಯಕ್ರಮದಲ್ಲಿ ಭವನದ ಕಾಮಗಾರಿ ಆರಂಭಕ್ಕೆ ಚಾಲನೆ ನೀಡಲಾಗಿತ್ತು. 2018ರಲ್ಲಿ ನೂತನ ಭವನ ಲೋಕಾರ್ಪಣೆಗೊಳಿಸುವ ಸದುದ್ದೇಶವನ್ನು ಸಹ ಹೊಂದಲಾಗಿತ್ತು. ಬದಲಾದ ರಾಜಕೀಯ ವ್ಯವಸ್ಥೆಯಿಂದ ಭವನದ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಇನ್ನು ಮುಂದೆ ಹೀಗಾಗಲು ಅವಕಾಶ ನೀಡುವುದಿಲ್ಲ ಎಂದರು.
ಈ ಹಿಂದೆ ನಿರ್ಧರಿಸಿದಂತೆ ಭವನದ ಕಾಮಗಾರಿ ಪೂರ್ಣಗೊಳ್ಳಬೇಕು. ಈಗಾಗಲೇ 1.50 ಕೋಟಿ ರೂ. ವೆಚ್ಚದ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ. ಉಳಿದ ಕಾಮಗಾರಿ ನಿಗದಿತ ಅವಧಿ ಮತ್ತು ಮೂಲ ಪ್ಲಾನ್‌ನಂತೆ ನಡೆಯಬೇಕು. ಈ ಸಲುವಾಗಿ ಬಾಕಿ ಕಾಮಗಾರಿ ಕುರಿತು ತ್ರೀಡಿ, ಬ್ಲೂ ಪ್ರಿಂಟ್ ನಕ್ಷೆಯನ್ನು ಸಿದ್ಧಪಡಿಸಿ ಸಲ್ಲಿಕೆಯಾದ ಬಳಿಕವೇ ಕೆಲಸವನ್ನು ಮುಂದುವರಿಸಬೇಕಾಗುತ್ತದೆ. ಸಂಬಂಧಪಟ್ಟ ಅಧಿಕಾರಿ, ಇಂಜಿನಿಯರ್ ಈ ಬಗ್ಗೆ ಕಾರ್ಯೋನ್ಮುಖರಾಗಬೇಕು ಎಂದು ಸೂಚನೆ ನೀಡಿದರು.
ಭವನದ ಕೆಲಸ ಆರಂಭಕ್ಕೂ ಮುನ್ನ ಸುತ್ತಮುತ್ತಲ ಖಾಲಿ ಜಾಗದಲ್ಲಿನ ತ್ಯಾಜ್ಯವನ್ನು ಸ್ವಚ್ಛಗೊಳಿಸಬೇಕು. ಆವರಣದಲ್ಲಿ ವಿದ್ಯುತ್ ಲೈನ್ ಇದ್ದು, ಇದನ್ನು ಸಹ ತೆರವುಗೊಳಿಸಬೇಕು. ಅಲ್ಲದೆ ಬಿಎಸ್‌ಎಲ್‌ಎನ್ ಕ್ವಾಟ್ರಸ್‌ನವರು ಭವನದ ಜಾಗದಲ್ಲಿ ತಿರುಗುವ ಬದಲು ಅವರಿಗೆ ಬಿಟ್ಟಿರುವ ಜಾಗದಲ್ಲಿ ಓಡಾಡುವಂತೆ ತಿಳಿವಳಿಕೆ ನೀಡಬೇಕೆಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ತಿಳಿಸಿದರು.
ತಹಸೀಲ್ದಾರ್ ಕೆ.ಸಿ.ಸೌಮ್ಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಜಿಪಂ ಸಹಾಯಕ ಇಂಜಿನಿಯರ್ ಶರತ್, ಸಮಾಜದ ಮುಖಂಡರು ಇದ್ದರು.