ಕುಂಭ ಮೇಳದ ಬೆನ್ನಲ್ಲೇ ಚಾರ್​​ ಧಾಮ್​ ಯಾತ್ರೆಗೆ ಸಜ್ಜಾದ ಉತ್ತರಾಖಂಡ

char
Published on

ಡೆಹ್ರಾಡೂನ್ : ದೇಶಾದ್ಯಂತ ಮತ್ತು ರಾಜ್ಯಾದ್ಯಂತ ಕರೊನಾ ಪ್ರಕರಣಗಳು ಉಲ್ಬಣವಾಗುತ್ತಿದ್ದರೂ ಉತ್ತರಾಖಂಡ ಸರ್ಕಾರವು ಚಾರ್​ ಧಾಮ್​ ಯಾತ್ರಾಗೆ ಸಜ್ಜಾಗುತ್ತಿದೆ. ರಾಜ್ಯದ ಹರಿದ್ವಾರದಲ್ಲಿ ನಡೆದ ಕುಂಭ ಮೇಳದಲ್ಲಿ ಲಕ್ಷಾಂತರ ಜನ ಪಾಲ್ಗೊಂಡು ಕರೊನಾ ಸೋಂಕು ಹೆಚ್ಚಾಗಿ ಹರಡುವ ಭೀತಿ ಹುಟ್ಟಿಸಿದ್ದ ಬೆನ್ನಲ್ಲೇ ಇದೀಗ ರಾಜ್ಯವು ಮತ್ತೊಂದು ಜನಪ್ರವಾಹಕ್ಕೆ ಅವಕಾಶ ಮಾಡಿಕೊಡುತ್ತಿದೆ.

ಕುಂಭ ಮೇಳದ ಸಮಯದಲ್ಲಿ ಉತ್ತರಾಖಂಡದಲ್ಲಿ ಕರೊನಾ ಸೋಂಕಿನ ಪ್ರಮಾಣ ಶೇ. 1800 ರಷ್ಟು ಹೆಚ್ಚಾಗಿತ್ತು ಎನ್ನಲಾಗಿದೆ. ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಕುಂಭ ಮೇಳಕ್ಕೆ ಮುನ್ನ ಮಾರ್ಚ್ 31 ರಂದು ರಾಜ್ಯದಲ್ಲಿ 1,863 ಸಕ್ರಿಯ ಕರೊನಾ ಪ್ರಕರಣಗಳಿದ್ದವು. ಅದೇ ಏಪ್ರಿಲ್ 27 ಕ್ಕೆ ಈ ಸಂಖ್ಯೆ 43,032 ತಲುಪಿತ್ತು. ಹಲವು ಯಾತ್ರಿಕರು ಮತ್ತು ಸಾಧುಸಂತರು ಈ ಸಮಯದಲ್ಲಿ ಕರೊನಾದಿಂದಾಗಿ ಮೃತಪಟ್ಟರು ಎನ್ನಲಾಗಿದೆ.

ಆದಾಗ್ಯೂ ಮೇ 14 ರಿಂದ ಚಾರ್​ಧಾಮ್ ಯಾತ್ರಾ ಅಂದರೆ ನಾಲ್ಕು ಮುಖ್ಯ ತೀರ್ಥ ಕ್ಷೇತ್ರಗಳಾದ ಕೇದಾರನಾಥ, ಬದರಿನಾಥ, ಗಂಗೋತ್ರಿ ಮತ್ತು ಯಮುನೋತ್ರಿಗಳಿಗೆ ಭಕ್ತರ ಯಾತ್ರೆಗೆ ಸರ್ಕಾರ ಅವಕಾಶ ನೀಡಿದೆ. ಈ ಯಾತ್ರೆಗೆ ಹೊಸದಾದ ಎಸ್​ಒಪಿಯನ್ನು ರೂಪಿಸಿರುವ ಸರ್ಕಾರ, ಕರೊನಾ ಹರಡದಂತೆ ಎಲ್ಲಾ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದೆ.

“ಚಾರ್ ಧಾಮ್ ಯಾತ್ರಾಗೆ ಬರುವವರೆಲ್ಲರಿಗೂ ನಾವು ನೆಗೆಟೀವ್ ಆರ್​ಟಿಪಿಸಿಆರ್​ ಟೆಸ್ಟ್​ಅನ್ನು ಕಡ್ಡಾಯಗೊಳಿಸಿದ್ದೇವೆ. ಯಾತ್ರೆಯು ನಂಬಿಕೆಯ ಪ್ರಶ್ನೆಯಾಗಿದೆ. ನಾವು ಜಗತ್ತಿನೆಲ್ಲೆಡೆಯಿಂದ ಬರುವ ನಮ್ಮ ಯಾತ್ರಿಕರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಿದ್ದೇವೆ” ಎಂದು ರಾಜ್ಯದ ಪ್ರವಾಸೋದ್ಯಮ ಸಚಿವ ಸತ್​ಪಾಲ್ ಮಹರಾಜ್ ಹೇಳಿದ್ದಾರೆ. ಈ ಯಾತ್ರೆಯ ಸಂದರ್ಭದಲ್ಲಿ ನಡೆಯುವ ಆರ್ಥಿಕ ಚಟುವಟಿಕೆಗಳ ಮೇಲೆ ರಾಜ್ಯದ ಲಕ್ಷಾಂತರ ಜನರ ಜೀವನೋಪಾಯ ಅವಲಂಬಿಸಿದೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net