ರಾಜಕೀಯದಲ್ಲಿ ಭ್ರಷ್ಟಾಚಾರ, ಸುಳ್ಳಿಗೆ ಜಾಗವಿಲ್ಲ ಎಂಬುದನ್ನು ಜನಾದೇಶ ತೋರಿಸಿದೆ; ದೆಹಲಿ ವಿಧಾನಸಭೆ ಚುನಾವಣೆ ಗೆಲುವಿನ ಬೆನ್ನಲ್ಲೇ PM Narendra Modi ಟೀಕೆ

Narendra Modi
Published on

ನವದೆಹಲಿ: 70 ಸದಸ್ಯಬಲದ ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆಲ್ಲುವ ಮೂಲಕ 27 ವರ್ಷಗಳ ರಾಷ್ಟ್ರ ರಾಜಧಾನಿಯ ಗದ್ದುಗೆಯನ್ನು ಏರಿದ್ದು, ಆಡಳಿತರೂಢ ಎಎಪಿಗೆ ಭಾರೀ ಮುಖಭಂಗವನ್ನುಂಟು ಮಾಡಿದೆ. ಈ ಬಾರಿಯ ಚುನಾವಣೆಯಲ್ಲೂ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದ್ದು, ಪಕ್ಷದ ಪುನಶ್ಚೇತನಕ್ಕೆ ಆಗ್ರಹ ಕೇಳಿ ಬರುತ್ತಿದೆ.

ಇನ್ನೂ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಐತಿಹಾಸಿಕ ಗೆಲುವು ಸಾಧಿಸಿರುವುದನ್ನ ಹಾಡಿ ಹೊರಗಳಿರುವ ಪ್ರಧಾನಿ ನರೇಂದ್ರ ಮೋದಿ (Narendra Modi), ದೇಶಕ್ಕೆ ವಂಚನೆ ಮತ್ತು ಮೂರ್ಖತನದ ರಾಜಕೀಯ ಬೇಕಿಲ್ಲ ಎಂದು ಎಎಪಿ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಪ್ರಧಾನಿ ಮೋದಿ (Narendra Modi), ಭ್ರಷ್ಟಾಚಾರ ವಿರುದ್ಧದ ಅಂದೋಲನದಿಂದಾಗಿ ಹುಟ್ಟಿಕೊಂಡ ಪಕ್ಷಕ್ಕೆ ಜನರು ಮನೆಯ ಕಡೆಗೆ ದಾರಿಯನ್ನ ತೋರಿಸಿದ್ದಾರೆ. ಮದ್ಯ ಹಗರಣ, ಶಾಲಾ ಹಗರಣಗಳು ದೆಹಲಿಯ ಪ್ರತಿಷ್ಠೆಗೆ ನಾಚಿಕೆಗೇಡಿನ ಸಂಗತಿಯಾಗಿದ್ದು, ಮುಖ್ಯಮಂತ್ರಿ, ಡಿಸಿಎಂ, ಸಚಿವರು ಹಾದಿಯಾಗಿ ಜೈಲಿಗೆ ಹೋಗಿ ಬಂದರು ಅಹಂಕಾರ ಮೆರೆಯುತ್ತಿದ್ದರು.

ಇಡೀ ದೆಹಲಿ ಕೋವಿಡ್​ನಿಂದ ನಲುಗುತ್ತಿದ್ದ ಸಂದರ್ಭದಲ್ಲಿ ಎಎಪಿ ನಾಯಕರು ಶೀಷ್ ಮಹಲ್ ಕಟ್ಟುವುದರಲ್ಲಿ ಬ್ಯುಸಿಯಿದ್ದರು. ದೆಹಲಿಯ ಮೊದಲ ವಿಧಾನಸಭಾ ಅಧಿವೇಶನದಲ್ಲಿ ಸಿಎಜಿ ವರದಿಯನ್ನು ಸದನದಲ್ಲಿ ಮಂಡಿಸಲಾಗುವುದು. ಇದು ಮೋದಿ ನಿಮಗೆ ನೀಡುತ್ತಿರುವ ಗ್ಯಾರಂಟಿ. ಇನ್ನು ಮುಂದೆ ಡಬಲ್‌ ಎಂಜಿನ್‌ ಸರ್ಕಾರವು ದೆಹಲಿಯ ಅಭಿವೃದ್ಧಿಯ ವೇಗವನ್ನು ಇಮ್ಮಡಿಗೊಳಿಸಲಿದೆ. ದೆಹಲಿಯ ಜನರು ಶಾರ್ಟ್-ಕಟ್‌ಗಳ ರಾಜಕೀಯವನ್ನು ಶಾರ್ಟ್-ಸರ್ಕ್ಯೂಟ್ ಮಾಡಿದ್ದಾರೆ. ರಾಜಕೀಯದಲ್ಲಿ ಭ್ರಷ್ಟಾಚಾರ ಮತ್ತು  ಸುಳ್ಳಿಗೆ ಜಾಗವಿಲ್ಲ ಎಂಬುದನ್ನು ಜನಾದೇಶ ಸ್ಪಷ್ಟಪಡಿಸಿದೆ. 

ದೇಶದ ಅತಿ ಹಳೆಯ ಪಕ್ಷವು ಕಳೆದ ಆರು ಚುನಾವಣೆಗಳಲ್ಲಿ (ಲೋಕಸಭೆ ಮತ್ತು ವಿಧಾನಸಭೆ) ಖಾತೆಯನ್ನು ತೆರೆಯುವಲ್ಲಿ ವಿಫಲವಾಗಿದೆ. ಕಾಂಗ್ರೆಸ್ ಪರಾವಲಂಬಿ ಪಕ್ಷ ಎಂದು ನಾನು ನಿಮಗೆ ಹೇಳಿದ್ದೇನೆ, ಅವರು ಮುಳುಗುತ್ತಿದ್ದಾರೆ ಎಂದೆನಿಸಲು ಶುರು ಮಾಡಿದಾಗ ಬೇರೆ ಪಕ್ಷಗಳ ಬಳಿ ಸಹಾಯ ಕೇಳುತ್ತಾರೆ. ಆ ನಂತರ ಮಿತ್ರಪಕ್ಷಗಳ ಅಜೆಂಡಾವನ್ನು ಕದ್ದು ಅವರ ವೋಟ್​ಬ್ಯಾಂಕ್​ಗೆ ಕೈ ಹಾಕುತ್ತಾರೆ. ಮಿತ್ರ ಪಕ್ಷಗಳನ್ನು ಒಂದೊಂದಾಗಿ ಮುಗಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ಯಾರೇ ಕಾಂಗ್ರೆಸ್‌ನ ಕೈ ಹಿಡಿದರೂ ಅವರ ಅಂತ್ಯ ಅನಿವಾರ್ಯ ಎಂಬುದು ಈಗ ಸ್ಪಷ್ಟವಾಗಿದೆ ಎಂದು ಪ್ರಧಾನಿ ಮೋದಿ (Narendra Modi) ದೆಹಲಿ ವಿಧಾನಸಭೆ ಚುನಾವಣೆ ಗೆಲುವಿನ ಬಳಿಕ ಎಎಪಿ ಹಾಗೂ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net