ಗೋಮಾತೆ ಸಂರಕ್ಷಣೆಗೆ ರಚಿಸಿರುವ ಗೋವರ್ಧನ ಟ್ರಸ್ಟ್ ಉದ್ಘಾಟನೆ 8ಕ್ಕೆ

Govardhan Trust
Published on

ಶಿವಮೊಗ್ಗ: ಗೋಮಾತೆ ಸಂರಕ್ಷಣೆಗಾಗಿ ನಗರದಲ್ಲಿ ಗೋವರ್ಧನ ಟ್ರಸ್ಟ್ ರಚಿಸಿದ್ದು, ಅ.8ರ ಸಂಜೆ 6ಕ್ಕೆ ನಗರದ ಅಲ್ಲಮಪ್ರಭು ಮೈದಾನದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಕೆ.ಇ.ಕಾಂತೇಶ್ ಹೇಳಿದರು.

ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಆಗಮಿಸುವರು. ಅಂದು ಸಂಜೆ ವೇದಘೋಷ, ಮಂಗಳವಾದ್ಯ, ಚಂಡೆ ಹಾಗೂ ಸಾವಿರಾರು ದ್ವಿಚಕ್ರ ವಾಹನಗಳೊಂದಿಗೆ ಶ್ರೀಗಳ ಪುರಪ್ರವೇಶ ನೆರವೇರಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ದೈವಜ್ಞ ಕಲ್ಯಾಣ ಮಂದಿರ ಆವರಣದಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಶ್ರೀಗಳ ಭವ್ಯ ಮೆರವಣಿಗೆ ಅಲ್ಲಮಪ್ರಭು ಮೈದಾನ ತಲುಪಲಿದೆ. ಈ ಸಂದರ್ಭದಲ್ಲಿ ಪಶುವೈದ್ಯಕೀಯ ಆಂಬುಲೆನ್ಸ್ ಲೋಕಾರ್ಪಣೆಗೊಳ್ಳಲಿದೆ. ಸುರಭಿ, ಜ್ಞಾನೇಶ್ವರಿ ಮತ್ತು ಮಹಾವೀರ ಗೋಶಾಲೆಗಳ ಗೋಸೇವಕರನ್ನು ಗೌರವಿಸಿ ಸನ್ಮಾನಿಸಲಾಗುವುದು ಎಂದರು. ಗೋ ಸಂರಕ್ಷಣೆ ಇಚ್ಛೆಯುಳ್ಳ ಪ್ರತಿಯೊಬ್ಬ ವ್ಯಕ್ತಿಯೂ ಮಾಸಿಕ 100 ರೂ.ಅನ್ನು ತನ್ನ ಜೀವಿತಾವಧಿ ಪೂರ್ತಿ ಗೋವರ್ಧನ ಟ್ರಸ್ಟ್‌ಗೆ ದೇಣಿಗೆ ನೀಡಬಹುದು. ಅದಕ್ಕಾಗಿ ಕೂಪನ್ ವಿತರಣೆ ಹಾಗೂ ಪ್ರತಿ ತಿಂಗಳು ನೇರವಾಗಿ ಬ್ಯಾಂಕ್ ಖಾತೆಯಿಂದ ಟ್ರಸ್ಟ್‌ಗೆ ಹಣ ವರ್ಗಾವಣೆಯಾಗುವಂತೆ ಮಾಡಲು ಇಸಿಎಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ಮಾಸಿಕ 100 ರೂ. ಕೂಪನ್ ಪಡೆದು ಮುಂದೆ ತಮ್ಮ ಜೀವಿತಾವಧಿಯವರೆಗೂ ಮಾಸಿಕ 100 ರೂ. ದೇಣಿಗೆ ನೀಡಲು 3,500ಕ್ಕೂ ಅಧಿಕ ಗೋ ಪ್ರೇಮಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಟ್ರಸ್ಟ್ ಮಹಾಪೋಷಕ ಎಚ್.ಎಸ್.ಶಿವಶಂಕರ್, ಸಿ.ವಿ.ರುದ್ರಾರಾಧ್ಯ, ಎಚ್.ಎಸ್.ನಾಗರಾಜ್, ಕೆ.ಸಿ.ನಟರಾಜ್ ಭಾಗವತ್, ಬಿ.ಎ.ರಂಗನಾಥ್, ಪ್ರಧಾನ ಕಾರ್ಯದರ್ಶಿ ಉಮೇಶ್ ಆರಾಧ್ಯ, ಎಸ್.ಕೆ.ಶೇಷಾಚಲ, ಟ್ರಸ್ಟಿಗಳಾದ ಮಹಾಲಿಂಗ ಶಾಸ್ತ್ರಿ, ಸಂದೇಶ್ ಉಪಾಧ್ಯ, ವಿನೋದ್‌ಕುಮಾರ್ ಜೈನ್, ಸಂಚಾಲಕರಾದ ಉಮಾ ಮೂರ್ತಿ, ಶುಭಾ ರಾಘವೇಂದ್ರ ಸುದ್ದಿಗೋಷ್ಠಿಯಲ್ಲಿದ್ದರು.

ಶಿವಮೊಗ್ಗ ನಗರವನ್ನು ಗೋಮಯಗೊಳಿಸಬೇಕೆಂಬ ಉದ್ದೇಶದಿಂದ ಗೋವರ್ಧನ ಟ್ರಸ್ಟ್ ಸ್ಥಾಪಿಸಲಾಗಿದೆ. ಯಾರ ಮನೆಗೆ ಹೋದರೂ ಉತ್ತಮ ಸ್ಪಂದನೆ ಸಿಗುತ್ತಿದೆ. ಗೋಮಾತೆಯನ್ನು ಚಿಂತಾಜನಕ ಸ್ಥಿತಿಯಿಂದ ಹೊರತರಬೇಕು ಎನ್ನುವುದು ಟ್ರಸ್ಟ್ ಗುರಿ. ಶೀಘ್ರದಲ್ಲೇ ಹೊಸ ಸಮಿತಿ ರಚನೆ ಮಾಡಲಾಗುವುದು. ಟ್ರಸ್ಟ್ ರಚನೆ ಆರಂಭವಷ್ಟೇ. ಮುಂದೆ ಸಾಕಷ್ಟು ಕೆಲಸ ಇವೆ. - ಕೆ.ಎಸ್.ಈಶ್ವರಪ್ಪ, ಗೋವರ್ಧನ ಟ್ರಸ್ಟ್ ಮಹಾಪೋಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net