ಗೋವರ್ಧನ ಟ್ರಸ್ಟ್‌ನಿಂದ ಐದು ಕಡೆ ಸಾಮೂಹಿಕ ಗೋಪೂಜೆ

Govardhan Trust
Published on

ಶಿವಮೊಗ್ಗ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಗೋವರ್ಧನ ಟ್ರಸ್ಟ್‌ನಿಂದ ನಗರದ ಐದು ಕಡೆ ಸಾಮೂಹಿಕ ಗೋಪೂಜೆಯನ್ನು ಅ.22ರಂದು ಬೆಳ್ಗೆ 8ರಿಂದ 11ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಮಹಾಪೋಷಕ ಕೆ.ಎಸ್.ಈಶ್ವರಪ್ಪ ಹೇಳಿದರು.

ವಿನೋಬನಗರ ಶಿವಾಲಯ, ಕೋಟೆ ರಸ್ತೆಯ ವಾಸವಿ ಶಾಲೆ, ಗೋಪಾಳದ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ, ರವೀಂದ್ರನಗರದ ಗಣಪತಿ ದೇವಸ್ಥಾನ ಹಾಗೂ ಶಾಂತಿನಗರದ ಶನೈಶ್ಚರ ದೇವಸ್ಥಾನದಲ್ಲಿ ಗೋವುಗಳಿಗೆ ವಿಶೇಷ ಪೂಜೆಯನ್ನು ನಡೆಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ವಿನೋಬನಗರ ಶಿವಾಲಯದಲ್ಲಿ ನಡೆಯುವ ಗೋ ಪೂಜೆಗೆ ಬಾಳೆಹೊನ್ನೂರು ರಂಬಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು, ಯಡಿಯೂರು ರಂಬಾಪುರಿ ಶಾಖಾ ಮಠದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಟ್ರಸ್ಟ್‌ನ ಅಧ್ಯಕ್ಷ ಕೆ.ಇ.ಕಾಂತೇಶ್ ಸೇರಿ ಹಲವರು ಗೋಪೂಜೆಯಲ್ಲಿ ಪಾಲ್ಗೊಳ್ಳುವರು ಎಂದರು.

ನಗರದ ನಾಗರಿಕರಿಗೆ ಗೋಪೂಜೆ ಅವಕಾಶವಿದ್ದು, ಮನೆಗಳಿಂದ ಯಾವುದೇ ವಸ್ತುಗಳನ್ನೂ ತರುವಂತಿಲ್ಲ. ಗೋವರ್ಧನ ಟ್ರಸ್ಟ್ ಪೂಜೆಗೆ ಸಂಬಂಧಿಸಿದ ಸಾಮಗ್ರಿಗಳನ್ನು, ಗೋವುಗಳಿಗೆ ತಿನಿಸು ವ್ಯವಸ್ಥೆ ಮಾಡಿದೆ. ಆಸಕ್ತರು ಟ್ರಸ್ಟ್‌ನಿಂದ ಖರೀದಿಸಿ ಗೋವುಗಳಿಗೆ ನೀಡಬಹುದು ಎಂದು ಹೇಳಿದರು.

ದೀಪಾವಳಿ ಎನ್ನುವುದು ಬೆಳಕಿನ ಹಬ್ಬ. ಹಾಗೆಯೇ ಗೋವುಗಳ ಹಬ್ಬ ಕೂಡ ಆಗಿದೆ. ದೀಪಾವಳಿ ಪರ್ವಕಾಲದಲ್ಲಿ ಮಾಡುವ ಗೋಪೂಜೆಯು ಬಾಳಿಗೆ ಶಕ್ತಿ ಮತ್ತು ತೃಪ್ತಿಯನ್ನೂ ನೀಡುತ್ತದೆ. ಗೋವಿನ ಹಿರಿಮೆಯನ್ನು ಕೊಂಡಾಡುವ ಹಬ್ಬವನ್ನು ಈ ಬಾರಿ ಗೋವರ್ಧನ ಟ್ರಸ್ಟ್ ವಿಶಿಷ್ಟವಾಗಿ ಆಚರಿಸುತ್ತಿದ್ದು, ಶಿವಮೊಗ್ಗದ ನಾಗರಿಕರು ಕೈಜೋಡಿಸಬೇಕೆಂದು ವಿನಂತಿಸಿದರು.

ಟ್ರಸ್ಟ್‌ನ ಉಮೇಶ್ ಆರಾಧ್ಯ, ಎಂ.ನಾಗೇಶ್, ಶೃಂಗೇರಿ ಎಚ್.ಎಸ್.ನಾಗರಾಜ್, ಸಂದೇಶ್ ಉಪಾಧ್ಯ, ಎಸ್.ಕೆ.ಶೇಷಾಚಲ, ಉಮಾ ಮೂರ್ತಿ, ನಿರ್ಮಲಾ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net