

ಶಿವಮೊಗ್ಗ: ಗೋವರ್ಧನ ಟ್ರಸ್ಟ್ ಮೂಲಕ ಆರಂಭಗೊಂಡಿರುವ ಗೋವುಗಳ ಸೇವೆಯು ಶಿವಮೊಗ್ಗಕ್ಕೆ ಮಾತ್ರ ಸೀಮಿತವಾಗದೇ ಇಡೀ ರಾಜ್ಯಕ್ಕೆ ವಿಸ್ತರಣೆ ಆಗಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ, ಟ್ರಸ್ಟ್ ಮಹಾಪೋಷಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಗೊಂದಿಚಟ್ನಹಳ್ಳಿಯಲ್ಲಿ ಸೋಮವಾರ ಗೋವರ್ಧನ ಟ್ರಸ್ಟ್‌ನಿಂದ 6 ಎಕರೆ ಜಾಗದಲ್ಲಿ ಗೋಮಾತೆಗೆ ಮೇವು ಬೆಳೆಯುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುರುಪೂರ್ಣಿಮೆ ದಿನದಂದು ಈ ವಿಚಾರ ಪ್ರಸ್ತಾಪವಾದಾಗ ಇದು ಇಷ್ಟು ದೊಡ್ಡಮಟ್ಟಕ್ಕೆ ಬೆಳೆಯುತ್ತದೆ ಎಂದುಕೊಂಡಿರಲಿಲ್ಲ. ಇದನ್ನು ರಾಜಕೀಯಕ್ಕೆ ಮಾಡುತ್ತೇವೆ ಎಂದು ಯಾರು ಏನೇ ಹೇಳಿಕೊಳ್ಳಲಿ. ನಮಗೆ ಅದರ ಚಿಂತೆಯಿಲ್ಲ ಎಂದರು.
ಗೋವು ನಮ್ಮ ತಾಯಿ. ಗೋವಿನ ಸೇವೆ ನಮ್ಮ ಕರ್ತವ್ಯ. ಅದಕ್ಕಾಗಿ ನಾವು ಇಂತಹ ಕಾರ್ಯ ಮಾಡಲೇಬೇಕು. ಈ ಪುಣ್ಯ ಕಾರ್ಯ ಒಂದು ತಿಂಗಳು, ಒಂದು ವರ್ಷ ಹೀಗೆ ಒಂದು ನಿಗದಿತ ಅವಧಿಯದ್ದಲ್ಲ. ಬದಲಾಗಿ ನಾವು, ನೀವುಗಳು ಬದುಕಿರುವವರೆಗೂ ಇದನ್ನು ನಡೆಸಿಕೊಂಡು ಹೋಗಬೇಕು. ಇಲ್ಲಿ ಶುರುವಾಗಿರುವ ಕಾರ್ಯ ರಾಜ್ಯಾದ್ಯಂತ ವಿಸ್ತರಣೆಯಾಗಿ ಎಲ್ಲೆಡೆ ಗೋಸೇವಾ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.
ಟ್ರಸ್ಟ್ ಅಧ್ಯಕ್ಷ ಕೆ.ಇ.ಕಾಂತೇಶ್ ಮಾತನಾಡಿದರು. ಟ್ರಸ್ಟ್‌ನ ಮಹಾಪೋಷಕ ಎಚ್.ಎಸ್.ಶಿವಶಂಕರ್, ಉಮಾಪತಿ, ಸಿ.ವಿ.ರುದ್ರಾರಾಧ್ಯ, ಎಚ್.ಎಸ್.ನಾಗರಾಜ್, ಕೆ.ಸಿ.ನಟರಾಜ್ ಭಾಗವತ್, ಬಿ.ಎ.ರಂಗನಾಥ್, ಪ್ರಧಾನ ಕಾರ್ಯದರ್ಶಿ ಉಮೇಶ್ ಆರಾಧ್ಯ, ಎಸ್.ಕೆ.ಶೇಷಾಚಲ, ಟ್ರಸ್ಟಿಗಳಾದ ಮಹಾಲಿಂಗ ಶಾಸ್ತ್ರಿ, ಸಂದೇಶ್ ಉಪಾಧ್ಯ, ವಿನೋದ್‌ಕುಮಾರ್ ಜೈನ್, ಶಿವಾನಂದಪ್ಪ, ನವ್ಯಶ್ರೀ ನಾಗೇಶ್, ಕುಬೇರಪ್ಪ, ಸತ್ಯಣ್ಣ, ರಮೇಶ್ ಬಾಬು, ಸಂಚಾಲಕರಾದ ಉಮಾ ಮೂರ್ತಿ, ಶುಭಾ ರಾಘವೇಂದ್ರ, ಸಂಧ್ಯಾ ಮತ್ತಿತರರು ಉಪಸ್ಥಿತರಿದ್ದರು.
2 ಲಕ್ಷ ರೂ. ದೇಣಿಗೆ ನೀಡಿದ ಭಟ್ಟಾರಕರು
ಗೋವರ್ಧನ ಟ್ರಸ್ಟ್‌ನಿಂದ ಗೋಮಾತೆಗಾಗಿ ಮೇವು ಬೆಳೆಯುವ ಕಾರ್ಯ ಮೆಚ್ಚಿ ಶ್ರೀಕ್ಷೇತ್ರ ಹೊಂಬುಜ ಜೈನ ಮಠದಿಂದ 2 ಲಕ್ಷ ರೂ.ಅನ್ನು ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ದೇಣಿಗೆಯಾಗಿ ನೀಡಿದರು. ಹುಬ್ಬಳ್ಳಿಯ ಜೈನಸಮಾಜದ ಸಹಕಾರದಿಂದ ಗೋವರ್ಧನ್ ಟ್ರಸ್ಟ್‌ನೊಂದಿಗೆ ಶ್ರೀ ಮಠದ ಆಶ್ರಯದಲ್ಲಿ ಮನುಷ್ಯನಿಗೆ ಕೃತಕವಾಗಿ ಕೈಕಾಲು ಜೋಡಣೆ ಮಾಡುವಂತೆ ಗೋವುಗಳಿಗೊ ಕೃತಕ ಕೈಕಾಲುಗಳ ಜೋಡಣೆಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.