ಆಘಾತಕ್ಕೀಡಾಗಿದ್ದ ಮರಿಗೆರಿಲ್ಲಾ ಮತ್ತೆ ಮನುಷ್ಯನ ನಂಬಿದ್ದು ಹೇಗೆ? ಮನಮಿಡಿಯುವ ಕಥೆ ಇಲ್ಲಿದೆ ನೋಡಿ..

gerilla
Published on

ಬೆಂಗಳೂರು: ಪ್ರಕೃತಿಯ ಭಾಗವಾದ ಪ್ರಾಣಿಗಳ ಮೇಲೆ ಕೆಲವರು ಕ್ರೌರ್ಯ ಮೆರೆದರೆ ಇನ್ನು ಕೆಲವರು ತಮ್ಮ ಕುಟುಂಬದ ಸದಸ್ಯರು ಅಥವಾ ಮಕ್ಕಳೆಂಬಂತೆ ಮಮಕಾರ ತೋರುತ್ತಾರೆ.ಮಾನವನ ಇಂತಹ ಎರಡು ಮುಖವನ್ನು ತೋರಿಸುವ ಕಥೆಯನ್ನು ಇನ್​ಸ್ಟಾಗ್ರಾಮ್​ ನಲ್ಲಿ ಹಂಚಿಕೊಳ್ಳಲಾಗಿದ್ದು, ವೈರಲ್​ ಆಗುತ್ತಿದೆ.

ಪಶುವೈದ್ಯ ಡಾ.ಕ್ಲೋಯ್ ಬುಟಿಂಗ್ ಇನ್​ಸ್ಟಾಗ್ರಾಮ್​ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಗೊರಿಲ್ಲಾಗಳು ನಮ್ಮಂತೆಯೇ ಆಘಾತ, ಭಯ ಮತ್ತು ದುಃಖವನ್ನು ಅನುಭವಿಸುತ್ತವೆ. ಅವು ಮಾನವನ ನಂಬಿಕೆ ಕಳೆದುಕೊಂಡರೆ ಮರಳಿ ಪಡೆಯುವುದು ತುಂಬಾ ಸವಾಲಿನ ಸಂಗತಿಯಾಗಿಬಿಡುತ್ತದೆ. ಆದರೆ ಈ ಮರಿಗೊರಿಲ್ಲಾಗೆ ಪ್ರೀತಿ ಮತ್ತು ದಯೆ ಸಿಕ್ಕಿದ್ದರಿಂದ ಮತ್ತೆ ಮಾನವರನ್ನು ನಂಬುವಂತಾಗಿದೆ ಎಂದು ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿರುವ ಗೊರಿಲ್ಲಾ ಮರಿಯ ತಾಯಿಯನ್ನು ಮಾಂಸಕ್ಕಾಗಿ ಕೆಲವು ಕಳ್ಳ ಬೇಟೆಗಾರರು ಕೊಂದಿದ್ದಾರೆ. ಬಳಿಕ ನಾಲ್ಕು ತಿಂಗಳ ವಯಸ್ಸಿನ ಗೊರಿಲ್ಲಾವನ್ನು ಹಿಡಿದು ಬಂಧಿಸಿಟ್ಟು ಮಾರಾಟ ಮಾಡಲು ಯೋಜಿಸಲಾಗಿತ್ತು. ಆದರೆ, ಅದೃಷ್ಟವಶಾತ್ ಅದನ್ನು ಕೆಲವರು ರಕ್ಷಿಸಿ ಪ್ರಾಣಿಧಾಮಕ್ಕೆ ಕೊಂಡೊಯ್ದಿದ್ದಾರೆ. ಮಹಿಳೆಯೊಬ್ಬರು ಈಗ ಗೊರಿಲ್ಲಾವನ್ನು ನೋಡಿಕೊಳ್ಳುತ್ತಿದ್ದಾರೆ. ಮೊದಮೊದಲು ಮನುಷ್ಯರ ಬಳಿ ಬರಲು ಹೆದರುತ್ತಿದ್ದ ಗೊರಿಲ್ಲಾ ಮರಿ ಇದೀಗ ಅದರ ಪಾಲಕರ ಜೊತೆ ಹೊಂದಿಕೊಂಡಿದೆ. ಈ ಪುಟ್ಟ ಜೀವಿಯ ಅವಸ್ಥೆ ನೋಡಿ ಹೃದಯ ಕಲಕುತ್ತಿದೆ. ಈ ಮರಿ ಗೊರಿಲ್ಲಾದ ನಂಬಿಕೆಗೆ ಮನುಷ್ಯರು ನಿಜವಾಗಿಯೂ ಅರ್ಹರೇ ಎಂದು ಅವರು ಆಶ್ಚರ್ಯಪಟ್ಟಿದ್ದಾರೆ.

ವಿಡಿಯೋಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿವಿಧ ಕಡೆಯ ಜನರು ಕಾಮೆಂಟ್ ಮಾಡಿದ್ದಾರೆ. ಗೊರಿಲ್ಲಾಗಳು ಭಾವನೆಗಳಿಗೆ ಬೆಲೆ ಕೊಡುತ್ತವೆ. ಈ ಜೀವಿಗಳನ್ನು ರಕ್ಷಿಸಲು ಹೆಚ್ಚಿನ ಕಲಸವಾಗಬೇಕಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net