

ಶಿಕಾರಿಪುರ: ದೀಪಾವಳಿಯ ಬಲಿಪಾಡ್ಯಮಿ ದಿನದಂದು ತಾಲೂಕಿನ ಚನ್ನಳ್ಳಿ ತೋಟದ ಮನೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕುಟುಂಬ ಸಮೇತರಾಗಿ ಗೋಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಗೋಮಾತೆಯ ಅನುಗ್ರಹದಿಂದ ನಾಡಿನಲ್ಲಿ ಸುಖ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿ ನೆಲೆಸಲಿ. ಗೋವಿನಲ್ಲಿ ಲಕ್ಷಾಂತರ ದೇವತೆಗಳ ವಾಸವಿರುತ್ತವೆ ಎಂಬ ನಂಬಿಕೆಯಿದೆ. ಗೋವು ಭಗವಂತನ ಸ್ವರೂಪ. ವಿಶಿಷ್ಟ ಗೋತಳಿಗಳು ವಿನಾಶದ ಅಂಚಿನಲ್ಲಿವೆ. ಅವುಗಳನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.
ತಾಲೂಕಿನಲ್ಲಿ ರೈತರು ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡಿದ್ದಾರೆ. ಸಂಕಷ್ಟದ ಸಮಯದಲ್ಲಿ ಗೋವುಗಳು ರೈತರ ಕೈಹಿಡಿದಿವೆ. ಶಿಕಾರಿಪುರ ತಾಲೂಕಿನಲ್ಲಿ ಅತಿ ಹೆಚ್ಚು ಹಾಲಿನ ಪ್ರಮಾಣ ಸಂಗ್ರಹವಾಗುತ್ತಿದೆ. ಗೋಮೂತ್ರ ಆರ್ಕದಿಂದ ಹಲವು ಕಾಯಿಲೆಗಳು ವಾಸಿಯಾಗುತ್ತವೆ. ಕೃಷಿಗೆ ಫಲವತ್ತಾದ ಗೊಬ್ಬರ ಸಿಗುತ್ತದೆ. ರೈತರ ಸಮೃದ್ಧಿಗೆ ಗೋವು ಕೂಡ ಕಾರಣ. ಮಲೆನಾಡು ಗಿಡ್ಡ ತಳಿ ಅತ್ಯಂತ ವಿಶೇಷ ತಳಿ, ಅದನ್ನು ಉಳಿಸುವ ಅಗತ್ಯವಿದೆ ಎಂದರು. ಪುತ್ರ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ತೇಜಸ್ವಿನಿ ಇತರರಿದ್ದರು.