

ರಾಮನಗರ: ಒಂಟಿ ಆನೆಯೊಂದು ತಾಲೂಕಿನ ಚೌಕಳ್ಳಿ ಮತ್ತು ಕೆ.ಗೋಪಳ್ಳಿ ಗ್ರಾಮಗಳಿಗೆ ಗುರುವಾರ ಬೆಳ್ಳಂಬೆಳಗ್ಗೆ ನುಗ್ಗಿ ದಾಂಧಲೆ ನಡೆಸಿದೆ.
ಆನೆಯ ಪುಂಡಾಟಕ್ಕೆ ಹಸು ಬಲಿಯಾಗಿದ್ದು, ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಗೋಪಳ್ಳಿ ಗ್ರಾಮಕ್ಕೆ ಆನೆ ದಾಳಿ ಇಟ್ಟಿತು. ವರದರಾಜ ಸ್ವಾಮಿ ದೇವಾಲಯದ ಉದ್ಘಾಟನೆ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಸಿಂಗರಿಸಿ, ಚಪ್ಪರ ಮತ್ತು ತೋರಣ ಕಟ್ಟಲಾಗಿತ್ತು. ಆದರೆ , ಆನೆಯ ಅಟ್ಟಹಾಸಕ್ಕೆ ಚಪ್ಪರ ಸಂಪೂರ್ಣ ಧ್ವಂಸವಾಗಿದೆ. ದೇವಾಲಯದ ಪಕ್ಕದಲ್ಲಿಯೇ ನಿಲುಗಡೆ ಮಾಡಿದ್ದ ಮಾರುತಿ ಒಮ್ನಿ ಕಾರಿನ ಮೇಲೂ ಸಲಗ ದಾಳಿ ನಡೆಸಿದ್ದು, ಕಾರಿನಲ್ಲಿ ಮಲಗಿದ್ದ ಗಾರೇಪಾಳ್ಯದ ನಿವಾಸಿ ಸುರೇಶ್ ಎಂಬುವರು ಗಾಯಗೊಂಡಿದ್ದಾರೆ. ನಂತರ ಪಕ್ಕದ ಚೌಕಳ್ಳಿ ಗ್ರಾಮಕ್ಕೂ ನುಗ್ಗಿದ ಆನೆ, ದಾರಿಯಲ್ಲಿ ಸಿಕ್ಕಿದ್ದನ್ನೆಲ್ಲಾ ಧ್ವಂಸ ಮಾಡಿದೆ. ಈ ವೇಳೆ ಜಮೀನಿನಲ್ಲಿ ಮೇಯುತ್ತಿದ್ದ ಹಸು ಬಲಿಯಾಗಿದೆ.