ರಾಜ್ಯದಲ್ಲಿ ಗಾಂಧಿಗಿರ ನೆನಪಿಸಿಕೊಂಡು ಗೂಂಡಾಗಿರಿ ಆಡಳಿತ: ಸಿ.ಟಿ.ರವಿ ಆರೋಪ | Gundaraj rule not prevailed

11 ckm 1 c.t.ravi
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ
Published on

ಬೆಂಗಳೂರು: ರಾಜ್ಯದಲ್ಲಿ ಗಾಂಧಿಗಿರಿ ಸ್ಮರಿಸುತ್ತಾ ಗೂಂಡಾಗಿರಿ ನಡೆಸಲಾಗುತ್ತಿದೆ. ಗಾಂಧಿ ಸ್ವರಾಜ್ಯ ಮಾಡುತ್ತೇವೆ ಎನ್ನುತ್ತಾ ಗೂಂಡಾಗಿರಿ ನಡೆಸುತ್ತಿದ್ದಾರೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ C T Ravi ಆರೋಪಿಸಿ, ಇಂತಹ ಆಡಳಿತ ಹೆಚ್ಚು ಕಾಲ ನಡೆಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ವೈಯಾಲಿಕಾವಲ್‌ನಲ್ಲಿರುವ ಮಾಜಿ ಸಚಿವ ಮುನಿರತ್ನ ನಿವಾಸದಲ್ಲಿ ಶುಕ್ರವಾರ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಸ್ವಲ್ಪ ಹೊತ್ತು ಚರ್ಚಿಸಿದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರದ ಧೋರಣೆ, ಪೊಲೀಸರ ವರ್ತನೆಯು ಸಂವಿಧಾನ ವಿರೋಧಿ ನಡೆಯಾಗಿದೆ ಎಂದರು.

ನನ್ನ ನಂತರ ಮುನಿರತ್ನ ಅವರ ಮೇಲೂ ಹಲ್ಲೆ ಮಾಡಿದ್ದಾರೆ. ಸಭಾಪತಿ ರೂಲಿಂಗ್ ಕೊಟ್ಟ ಮೇಲೂ ಕೇಸ್ ದಾಖಲಿಸಿದ್ದಾರೆ. ನೋಟಿಸ್ ಕೊಡದಿದ್ದರೂ ಕೊಟ್ಟಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ದೂರಿದರು.

ಕಾನೂನುಬಾಹಿರವಾಗಿ ಬಂಧಿಸಿದ್ದಲ್ಲದೆ ಮಾನವಹಕ್ಕುಗಳ ನಿಯಮಗಳನ್ನು ಮೀರಿ ನಡೆದುಕೊಂಡರು.

ಹೋರಾಟದ ಹಿನ್ನೆಲೆಯಿಂದ ಬಂದವನಾಗಿದ್ದು, ಬೆದರಿಕೆಗೆ ಬೆನ್ನು ಕೊಟ್ಟು ಓಡಿ ಹೋಗುವುದಿಲ್ಲ, ಗೂಂಡಾಗಿರಿ ಬಹಳ ದಿನ ನಡೆಯುವುದಿಲ್ಲ. ಸಂವಿಧಾನಬದ್ಧವಾದ ಹಕ್ಕು ಕಿತ್ತುಕೊಳ್ಳಲಾಗುವುದಿಲ್ಲ ಎಂದು ಸಿ.ಟಿ.ರವಿ ವಾಗ್ದಾಳಿ ಮಾಡಿದರು.

ಆಣೆಪ್ರಮಾಣಕ್ಕೆ ಸವಾಲು

ಮಾಜಿ ಸಚಿವ ಮುನಿರತ್ನ ಮಾತನಾಡಿ ಕ್ಷೇತ್ರಕ್ಕೆ ಕಾಲಿಡದಂತೆ ತಡೆದು, ಶಾಸಕನ ಹಕ್ಕು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗಿ ಬಂದವರು, ಅವರಿಗೆ ಕ್ಷೇತ್ರಕ್ಕೆ ಹೋಗಲು ಅವಕಾಶವಿದ್ದರೆ ನನಗೆ ತಡೆಯುತ್ತಿದ್ದಾರೆ ಎಂದು ದೂರಿದರು.

ಅಪ್ಪ-ಮಗಳು ತೊಂದರೆ ಕೊಡುತ್ತಿದ್ದಾರೆ ಎಂದು ಕ್ಷೇತ್ರದ ಜನರು ಮಾತನಾಡುತ್ತಿದ್ದಾರೆ. ಕೋರ್ಟ್‌ನ ತೀರ್ಪು ಗೌರವಿಸುತ್ತೇನೆ, ಅದೇ ಕಾಲಕ್ಕೆ ಕಾಲಭೈರವೇಶ್ವರನ ಸನ್ನಿಧಿಗೆ ಬಂದು ಕುಸುಮಾ ಆಣೆ ಪ್ರಮಾಣ ಮಾಡಬೇಕು ಎಂದೂ ಸವಾಲೆಸೆಯುವೆ.

ಕುಸುಮಾ ಅವರೇ ಹೇಳಿಕೊಂಡಂತೆ ವಿದ್ಯಾವಂತರಿದ್ದಾರೆ. ಹಲ್ಲೆಯಂತಹ ಕೃತ್ಯಗಳಿಗೆ ಪ್ರಚೋದನೆ, ಚಪ್ಪಲಿ ಹಾರ ಹಾಕಲು, ಭಿತ್ತಿಪತ್ರ ಹರಿಯಲು ಪ್ರೋತ್ಸಾಹಿಸಬಾರದು ಎಂದು ಮುನಿರತ್ನ ವಿನಂತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net